ಯಾಂತ್ರೀಕೃತ ನಾಟಿಯಲ್ಲಿ ಪಾಲ್ಗೊಂಡ ಶಾಸಕ

20 gkp 02
Published on

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪ
ಜಗಜೀವನ್‌ರಾಂ ಕೃಷಿ ಸಮ್ಮಾನ್ ಪ್ರಶಸ್ತಿ ವಿಜೇತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಕೃಷಿ ಭೂಮಿಯಲ್ಲಿ ಸೋಮವಾರ ನಡೆದ ಯಾಂತ್ರೀಕೃತ ನಾಟಿಯಲ್ಲಿ ಶಾಸಕ ಕೆ. ಜಿ. ಬೋಪಯ್ಯ ಪಾಲ್ಗೊಂಡು, ಸ್ಥಳದಲ್ಲಿಯೇ ರೈತನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ಬೆಳಗ್ಗೆ ರೈತನ ಗದ್ದೆಗೆ ಆಗಮಿಸಿದ ಶಾಸಕರು, ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಯಾಂತ್ರೀಕೃತ ನಾಟಿಯಲ್ಲಿ ಪಾಲ್ಗೊಂಡು ನಾಟಿ ಬಗ್ಗೆ ಮಾಹಿತಿ ಪಡೆದುಕೊಂಡರು. ಕೊಡಗು ಜಿಲ್ಲೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಕಾರಣವಾದ ಗಣೇಶ್ ಅವರನ್ನು ಸ್ಥಳದಲ್ಲಿಯೇ ಸನ್ಮಾನಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿ, ಭತ್ತ ಬೆಳೆಯಿಂದ ನಷ್ಟವಿಲ್ಲ ಎಂಬುದನ್ನು ಗಣೇಶ್ ತಿಮ್ಮಯ್ಯ ತೋರಿಸಿಕೊಟ್ಟಿದ್ದಾರೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭತ್ತ ಬೆಳೆ ಲಾಭದಾಯಕ ಅಲ್ಲ, ವನ್ಯಪ್ರಾಣಿಗಳ ಹಾವಳಿ ಬೇರೆ ಎಂಬ ಕಾರಣಕ್ಕೆ ಭತ್ತ ಬೆಳೆಯಿಂದ ದೂರ ಉಳಿಯುತ್ತಿರುವ ಕಾಲಘಟ್ಟದಲ್ಲಿ, ಭತ್ತದ ಬೆಳೆ ಲಾಭದಾಯಕ ಎಂಬ ಸಂದೇಶವನ್ನು ಕೃಷಿಕರಿಗೆ ನೀಡಿರುವ ಇವರು ಎಲ್ಲರಿಗೂ ಮಾದರಿ. ವೈಜ್ಞಾನಿಕ ಕೃಷಿ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ತೆಗೆಯುವುದನ್ನು ಅರಿತುಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಈ ಸಂದರ್ಭ ಗೋಣಿಕೊಪ್ಪ ಕೆವಿಕೆ ವಿಜ್ಞಾನಿಗಳಾದ ಡಾ.ವೀರೇಂದ್ರಕುಮಾರ್, ಡಾ.ಪ್ರಭಾಕರ್ ಯಾಂತ್ರೀಕೃತಿ ನಾಟಿ ಬಗ್ಗೆ ಮಾಹಿತಿ ಪಡೆದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಚೆಪ್ಪುಡೀರ ಜಿ. ಕುಶಾಲಪ್ಪ, ವಿಸ್ತರಣಾ ಘಟಕ ಮುಖ್ಯಸ್ಥ ಡಾ.ಕೆಂಚರೆಡ್ಡಿ ಪಾಲ್ಗೊಂಡಿದ್ದರು.
ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಚೀರ ಕವಿತಾ ಬೋಜಪ್ಪ, ಪ್ರಮುಖರಾದ ವಿನು ಚೆಂಗಪ್ಪ, ಆಲೆಮಾಡ ಸುದೀರ್, ಅರುಣ್ ಭೀಮಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net