

ಶಂಕರ ಶರ್ಮಾ ಕುಮಟಾ
ಹಳ್ಳಿಗರು ಮಾತ್ರವಲ್ಲದೆ ಸದ್ಯ ಕರೊನಾ ಸಂಕಟದಿಂದ ಉದ್ಯೋಗ ಬಿಟ್ಟು ಊರು ಸೇರಿದ ಯುವ ಜನತೆಯೂ ಕೃಷಿಯಲ್ಲಿ ಭವಿಷ್ಯ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಇದರಿಂದಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಡಿಗೆ ಯಂತ್ರೋಪಕರಣಗಳ ಬಳಕೆಗೆ ಒಲವು ಹೆಚ್ಚಾಗಿದೆ.
ಕೃಷಿಯನ್ನು ಆಸಕ್ತಿದಾಯಕ ಹಾಗೂ ಲಾಭದಾಯಕ ಮಾಡುವ ನಿಟ್ಟಿನಲ್ಲಿ ಸರ್ಕಾರದ ಬೆಂಬಲದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆ ಕೇಂದ್ರಗಳು ತೆರೆಯಲ್ಪಟ್ಟಿವೆ. ಬೇಸಾಯಕ್ಕೆ ಬೇಕಾದ ಯಂತ್ರೋಪಕರಣ ಹಾಗೂ ಪರಿಕರಗಳನ್ನು ಬಾಡಿಗೆಗೆ ಪಡೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿಗೆ ನೆರವಾಗುವ ಯಂತ್ರಶ್ರೀ ಯೋಜನೆ ಜಿಲ್ಲಾದ್ಯಂತ ಜಾರಿಯಲ್ಲಿದೆ. ಯೋಜನೆ ಜಾರಿಗೆ ತಂದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಸಂಕಲ್ಪಕ್ಕೆ ಕರೊನಾ ಮಹಾಮಾರಿಯಿಂದ ಸ್ವಲ್ಪ ಹಿನ್ನಡೆಯಾಗುತ್ತಿದ್ದರೂ ಪ್ರಾಯೋಗಿಕವಾಗಿ ಯಶಸ್ವಿಯಾಗುತ್ತಿದೆ.
ಯಂತ್ರಧಾರಾ: ಕುಮಟಾದ ಕೂಜಳ್ಳಿ, ಅಂಕೋಲಾದ ಬಳಲೆ, ಕಾರವಾರದ ಕಿನ್ನರ, ಹೊನ್ನಾವರದ ಮಂಕಿ, ಭಟ್ಕಳದ ಮಾವಳ್ಳಿ, ಸಿದ್ದಾಪುರದ ಕೊಂಡ್ಲಿ, ಶಿರಸಿಯ ಬನವಾಸಿ, ದಾಂಡೇಲಿಯ ಕುಂಬಾರವಾಡ ಹಾಗೂ ಯಲ್ಲಾಪುರ, ಪಾಳಾ, ಹಳಿಯಾಳದಲ್ಲಿರುವ ಯಂತ್ರಧಾರೆ ಕೇಂದ್ರಗಳಲ್ಲಿ 16
ನಾಟಿ ಯಂತ್ರಗಳಿವೆ. ಈಗಾಗಲೇ ಸಸಿ ಮಡಿ ತಯಾರಿಗಾಗಿ 37,000 ಟ್ರೇ ವಿತರಿಸಲಾಗಿದೆ. ಉತ್ತಮ ಮಳೆಯಾಗುತ್ತಿರುವುದರಿಂದ ಶೇ. 40ರಷ್ಟು ನಾಟಿ ಕಾರ್ಯ ಮುಗಿದಿದೆ. ಯಂತ್ರಧಾರಾ ಕೇಂದ್ರಗಳಲ್ಲಿ ಬೇಡಿಕೆ ಹೆಚ್ಚಿದೆ. ಗದ್ದೆಗಳಲ್ಲಿ ಯಂತ್ರಗಳ ಸದ್ದು ಜೋರಾಗಿದೆ.
ನಾಟಿಗೆ ಯಂತ್ರ: ಭತ್ತ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಸರ್ಕಾರ ಒತ್ತು ನೀಡಿದ್ದರೂ ಜಿಲ್ಲೆಯಲ್ಲಿ ರೈತರ ಆಸಕ್ತಿ ಅಷ್ಟಾಗಿಲ್ಲ. ಆದರೆ, ಒಂದು ಎಕರೆಗೆ ಯಾಂತ್ರೀಕೃತ ಭತ್ತ ನಾಟಿಗೆ ತಗಲುವ ವೆಚ್ಚ (ಉಳುಮೆ, ಬೀಜ, ನಾಟಿ) 7,000 ರಿಂದ 8,000 ರೂ.
ಗಳಾದರೆ ಮಾಮೂಲಿ ನಾಟಿಗೆ 15,000 ರಿಂದ 18,000 ರೂ. ಬೇಕು. ಯಾಂತ್ರೀಕೃತ ಭತ್ತ ನಾಟಿಗೆ ಎಕರೆಗೆ ತಗಲುವ ಬೀಜ 10 ರಿಂದ 15 ಕೆಜಿ ಹಾಗೂ 3-4 ತಾಸು ಸಮಯ ಸಾಕಾಗುತ್ತದೆ. ಮಾಮೂಲಿ ನಾಟಿಯಲ್ಲಿ 40-50 ಕೆಜಿ ಬೀಜ ಹಾಗೂ 15-20 ಆಳುಗಳು ಬೇಕು. ಸಸಿ ಮಡಿಗಳಲ್ಲಿ 16-22 ದಿನಗಳಲ್ಲಿ ನಾಟಿ ಸಸಿ ಸಿದ್ಧವಾದರೆ, ಮಾಮೂಲಿ ನಾಟಿಯ ಸಸಿಗೆ 28-30 ದಿನ ಬೇಕು. ಭತ್ತ ಬೇಸಾಯದಲ್ಲಿ ಯಂತ್ರ ಬಳಕೆಯಿಂದ ಅರ್ಧದಷ್ಟು ಖರ್ಚು ಕಡಿಮೆಯಾಗಲಿದೆ. ಯಾವುದೇ ತಳಿಯಾದರೂ ಇಳುವರಿ ದುಪ್ಪಟ್ಟಾಗುತ್ತದೆ ಎನ್ನುವುದು ಅನುಭವಿಕರ ಅಭಿಪ್ರಾಯ. ಭತ್ತ ಬೇಸಾಯ ಯಾಂತ್ರಿಕತೆಯಿಂದ ಸುಲಭ ಹಾಗೂ ಲಾಭದಾಯಕವಾಗಿದ್ದರಿಂದ ಮುಂದಿನ ವರ್ಷಗಳಲ್ಲಿ ಜಿಲ್ಲೆಯ ಭತ್ತ ಬೇಸಾಯ ಕ್ಷೇತ್ರ ಇನ್ನಷ್ಟು ಸಮೃದ್ಧಗೊಳ್ಳಬಹುದಾಗಿದೆ.
ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ಶೇ. 50ರಷ್ಟು ಉಳಿತಾಯವಿದೆ. ಯಂತ್ರಗಳಿಂದ ಹೆಚ್ಚು ಕ್ಷೇತ್ರದಲ್ಲಿ ಸಾಗುವಳಿ ಸಲೀಸು. ಪಾಳು ಬಿದ್ದ ಜಮೀನನ್ನು ಕೂಡ ಸಾಗುವಳಿ ಮಾಡಬಹುದು. ಈಗ ದೊಡ್ಡ ಶಹರಗಳಿಂದ ಉದ್ಯೋಗ ಬಿಟ್ಟು ಊರು ಸೇರಿರುವ ಯುವಕರ ಭವಿಷ್ಯ ಅಯೋಮಯವಾಗಿದೆ. ಅವರು ಆಸಕ್ತಿ ಕಳೆದುಕೊಂಡಿರುವ ಪಾರಂಪರಿಕ ಕೃಷಿಯ ಬದಲು ಯಾಂತ್ರಿಕ ಕೃಷಿ ಆಸಕ್ತಿ ಹುಟ್ಟಿಸಿದೆ.| ದೇವಣ್ಣ ನಾಯಕ ಬರ್ಗಿ ಕುಮಟಾ
ಈ ವರ್ಷ ಜಿಲ್ಲೆಯಲ್ಲಿ 2,500 ಎಕರೆ ಯಂತ್ರ ಭತ್ತ ನಾಟಿ ಗುರಿ ಹೊಂದಲಾಗಿತ್ತು. ಆದರೆ, ಕರೊನಾ ಸಮಸ್ಯೆಯಿಂದ 1 ಸಾವಿರ ಎಕರೆಗೆ ಗುರಿ ಇಟ್ಟುಕೊಂಡು ಈಗಾಗಲೇ ಶೇ. 40ರಷ್ಟು ನಾಟಿ ಕಾರ್ಯ ನಡೆದಿದೆ. ಕೆಲವೆಡೆ ಸಸಿ ಮಡಿ ಸಿದ್ಧಗೊಳ್ಳುತ್ತಿದೆ. ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರು ಯೋಜನೆಯಿಂದ ಸಾಲ ಮತ್ತು ಪ್ರೋತ್ಸಾಹಧನ ಪಡೆದು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಿ.| ಶಂಕರ ಶೆಟ್ಟಿ ಜಿಲ್ಲಾ ನಿರ್ದೇಶಕರು ಧ.ಗ್ರಾ. ಯೋಜನೆ