

ಮೂಡಿಗೆರೆ: ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ವಿಕೋಪ ಮತ್ತು ಇತರ ಕಾರಣಗಳಿಂದ ಕ್ಷೀಣಿಸಿರುವ ಭತ್ತದ ಬೆಳೆ ಬಗ್ಗೆ ರೈತರು ಹೆಚ್ಚಿನ ಆಸಕ್ತಿವಹಿಸಬೇಕು. ಪಾಳು ಬಿಟ್ಟಿರುವ ಗದ್ದೆಗಳಲ್ಲಿ ಬೇಸಾಯ ಆರಂಭಿಸಿ, ಹೆಚ್ಚು ಇಳುವರಿ ನೀಡುವ ತಳಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಬಿ.ಜಿ.ಯಮುನಾ ಹೇಳಿದರು.
ಬಿ.ಹೊಸಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಗುರುವಾರ ನಡೆದ ಭತ್ತದ ಬೇಸಾಯ, ಸಹ್ಯಾದ್ರಿ ಕೆಂಪು ಮುಕ್ತಿ ತಳಿ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಈ ಸಮಸ್ಯೆ ಬಗೆಹರಿಸಲು ಯಾಂತ್ರಿಕೃತ ಬೇಸಾಯದ ಮೊರೆ ಹೋಗುವುದು ಉತ್ತಮ ಎಂದರು.
ಅಧಿಕ ಇಳುವರಿ ನೀಡುವ ಸಹ್ಯಾದ್ರಿ ಕೆಂಪು ಮುಕ್ತಿ ತಳಿ ಬಳಸುವುದು ಸೂಕ್ತ. ಈ ತಳಿ ಕೆಂಪು ಅಕ್ಕಿಯ ವಿಧವಾಗಿದೆ. ಬೆಂಕಿ ರೋಗ ಹಾಗೂ ಊದುಬತ್ತಿ ರೋಗದ ನಿರೋಧಕಶಕ್ತಿಯನ್ನು ಈ ತಳಿಹೊಂದಿದೆ. ಎಲೆ ಸುರುಳಿ ಹಾಗೂ ಕೀಟಬಾಧೆ ಸಹಿಸುವ ಶಕ್ತಿಯನ್ನು ಸಹ ಹೊಂದಿದೆ. ನಾಟಿ ಮಾಡಿದ ದಿನದಿಂದ 125 ರಿಂದ 130 ದಿನದೊಳಗೆ ಕಟಾವಿಗೆ ಬರುವ ಈ ತಳಿಯಿಂದ ಪ್ರತಿ ಎಕರೆಗೆ 20ರಿಂದ 22 ಕ್ವಿಂಟಾಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಪ್ರಗತಿಪರ ರೈತ ರಂಜಿತ್ ಮಾತನಾಡಿ, ಸಹ್ಯಾದ್ರಿ ಕೆಂಪು ಮುಕ್ತಿ ತಳಿಯನ್ನು ಯಂತ್ರಗಳ ಸಹಾಯದಿಂದ ನಾಟಿ, ಕಟಾವು ಮಾಡಲು ಅವಕಾಶ ಇರುವುದರಿಂದ ಕಾರ್ಮಿಕರ ಕೊರತೆ ನೀಗಿಸಿ ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡಬಹುದು ಎಂದು ತಿಳಿಸಿದರು. ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅನೇಕ ಸ್ಥಳೀಯ ರೈತರು ಭಾಗವಹಿಸಿದ್ದರು.