ಯಶಸ್ಸು ಪಡೆಯಲು ತಾಳ್ಮೆ ಅವಶ್ಯಕ

mysore
Published on

ಮೈಸೂರು: ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ಕೆಲಸದಲ್ಲಿ ತಾಳ್ಮೆ ವಹಿಸಬೇಕು ಎಂದು ಭೋರುಕಾ ಫ್ಯಾಬ್ಕಾನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಉತ್ಸವ್ ಅಗರ್ವಾಲ್ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟ, ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟರ್ ಆಕ್ಸನ್ ಉನ್ನತ ಶಿಕ್ಷಣ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕೌಶಲ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕು ತೆರೆದ ಪುಸ್ತಕದಂತೆ ಇರಬೇಕು. ಸಿಗುವಂತಹ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಯುವ ಜನತೆಯ ನಿರ್ಧಾರಗಳು ಕ್ಷಣ ಮಾತ್ರದಲ್ಲಿ ಬದಲಾಗುತ್ತಿರುತ್ತವೆ. ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ತಾವು ನಿರ್ವಹಿಸುತ್ತಿರುವ ಕೆಲಸದಲ್ಲಿ ತಾಳ್ಮೆ ವಹಿಸಬೇಕು ಎಂದು ಹೇಳಿದರು.

ಎಕ್ಸೆಲ್ ಸಾಫ್ಟ್ ಟೆಕ್ನಾಲಜಿ ಲಿಮಿಟೆಡ್‌ನ ನಿರ್ದೇಶಕಿ ಶ್ರುತಿ ಸುಧನ್ವ ಮಾತನಾಡಿ, ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಬೆಳವಣಿಗೆಗೆ ಅಡಿಪಾಯವಾಗಿದೆ. ಓದಿನ ಜತೆಗೆ ಕೌಶಲವು ಮುಖ್ಯ. ಸಂವಹನ ಕೌಶಲವನ್ನು ಪರಿಣಾಮಕಾರಿಯಾಗಿ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಚಾರ್ಯ ಡಾ.ಎಂ.ಪ್ರಭು, ಐಕ್ಯೂಎಸಿ ಸಂಯೋಜಕ ಡಾ. ಎನ್. ರಾಜೇಂದ್ರ ಪ್ರಸಾದ್, ಗಣಕ ವಿಜ್ಞಾನ ವಿಭಾಗದ ಅಧ್ಯಾಪಕಿ ಬಿ. ಸುಷ್ಮ್ಮಾ, ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net