

ಮಹಾಲಿಂಗಪುರ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಂಡು ಆತ್ಮವಿಶಾಸ ಬೆಳೆಸಿಕೊಂಡರೆ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಸ್ಥಳೀಯ ಅಕ್ಷರ ವಿದ್ಯಾವಿಹಾರ ಮಾಡರ್ನ್ ಶಾಲೆ ಹಾಗೂ ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣದೊಂದಿಗೆ ಕೌಶಲ ಬೆಳೆಸಬೇಕು ಎಂದರು.
ಭಾರತದಲ್ಲಿ ಆದಿಕಾಲದಿಂದಲೂ ನಡೆದುಕೊಂಡ ಬಂದ ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆಯಾಗಿದೆ. ಭಾರತಕ್ಕೆ ಬ್ರಿಟಿಷರ ಆಗಮನದಿಂದ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಯಿತು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಶಿಕ್ಷಣದ ಮಹತ್ವ ಪಾಲಕರ ಗಮನಕ್ಕೆ ಬಂದಿದೆ. ಸರ್ಕಾರಗಳು ಶಿಕ್ಷಣಕ್ಕೆ ಮಹತ್ವ ನೀಡಿವೆ. ಎಲ್ಲರಲ್ಲಿ ಶಿಕ್ಷಣದ ಜಾಗೃತಿ ಮೂಡಿಸಿದ್ದರಿಂದ ಇಂದು ಸುಶಿಕ್ಷಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದೆ. ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತೇವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಿರೋಳ ರಾಮರೂಢ ಮಠದ ಶಂಕರಾರೂಢ ಸ್ವಾಮೀಜಿ, ರಾಮದುರ್ಗದ ವಿದ್ಯಾರಣ್ಯ ಗುರುಕುಲದ ಸಂಸ್ಥಾಪಕ ವಾಸುದೇವ ಸುತದಾಸ ಮಾತನಾಡಿದರು.
ಸಾಧಕರಿಗೆ ಪ್ರಶಸ್ತಿ: ಖಾಸಗಿ ವಾಹಿನಿಯ ಚಂದ್ರಶೇಖರ ಪಮ್ಮಾರ, ಸಮಾಜ ಸೇವಕ ಚನ್ನಬಸು ಹುರಕಡ್ಲಿ, ಕ್ರೀಡಾ ಸಾಧಕ ರವಿ ಬಿದರಿ, ುಡ್ ರೈಡರ್ ಚಂದ್ರಶೇಖರ ಹಳ್ಳಿಕೇರಿ, ಲಿಮ್ಕಾ ಬುಕ್ ಆ್ ರಿಕಾರ್ಡ್ಸ್ ದಾಖಲೆ ಮಾಡಿದ ಶಿಕ್ಷಕ ಗುರು ಮಠಪತಿ, ಕೌನ್ ಬನೇಗಾ ಕರೋಡಪತಿಯಲ್ಲಿ ಭಾಗವಹಿಸಿ 50 ಲಕ್ಷ ರೂಪಾಯಿ ಗೆದ್ದ ರಂಜಾನ್ ಪೀರಜಾದೆ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಶರಣಪ್ಪ ಅಂಗಡಿ, ಮಹೇಶ ಉಪ್ಪಿನ ಕಾಲೇಜಿನ ವಾರ್ಷಿಕ ವರದಿ ಓದಿದರು.
ಶಾಲೆಯ ಅಧ್ಯಕ್ಷೆ ತೇಜಸ್ವೀತಾ ಮೇತ್ರಿ, ಪ್ರಕಾಶ ಮೇತ್ರಿ, ಡಾ.ವಿನೋದ ಮೇತ್ರಿ, ಸಂಗಮೇಶ ಬಬಲೇಶ್ವರ, ಡಾ.ಎ.ಆರ್ ಬೆಳಗಲಿ, ಮಹೇಶ ಮನ್ನಯ್ಯನವರಮಠ ಇದ್ದರು.