

ನವೀನ್ ಶೆಟ್ಟಿ ಕೆರಾಡಿ ಆನೇಕಲ್
ದೇಶದಲ್ಲೇ ಅತಿ ದೊಡ್ಡ ಚಿರತೆ ಸಫಾರಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರಂಭವಾಗಿದ್ದು, ಜೂನ್‌ನಲ್ಲಿ ಪ್ರಾರಂಭವಾಗಿರುವ ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹುಲಿ, ಸಿಂಹ, ಕರಡಿ ಸಫಾರಿ ಜತೆಗೆ ಚಿರತೆ ಸಫಾರಿಯನ್ನು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿ ಸೇರ್ಪಡೆ ಮಾಡಲಾಗಿತ್ತು. ಅತಿ ಹತ್ತಿರದಿಂದ ಪ್ರವಾಸಿಗರು ಬಸ್ ಮೂಲಕ ಒಳಗೆ ಹೋಗಿ ಚಿರತೆಗಳನ್ನು ನೋಡುವ ಅವಕಾಶವನ್ನು ಈ ಸಪಾರಿ ಕಲ್ಪಿಸಿಕೊಟ್ಟಿದೆ.
ಚಿರತೆ ಸಫಾರಿಗೆ ಪ್ರವಾಸಿರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 19 ಚಿರತೆಗಳನ್ನು ಸದ್ಯ ಈ ತೆರೆದ 50 ಎಕರೆ ಪ್ರದೇಶದಲ್ಲಿ ಬಿಡಲಾಗಿದೆ. ದೇಶದಲ್ಲೇ ಮೊದಲ ಚಿರತೆ ಸಫಾರಿ ಎಂಬ ಹೆಗ್ಗಳಿಕೆ ಇದಕ್ಕಿದೆ.
ನೂರಾರು ಪ್ರವಾಸಿಗರು ವಾಹನದ ಸಮೀಪದಲ್ಲಿಯೇ ಚಿರತೆಗಳನ್ನು ಕಂಡು ಸಂಭ್ರಮಿಸುತ್ತಿದ್ದು, ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ, ಕೆಲವೊಮ್ಮೆ ಚಿರತೆಗಳು ತೆರೆದ ಪ್ರದೇಶದಲ್ಲಿ ಇರುವ ಸಂದರ್ಭದಲ್ಲಿ ಬಸ್‌ಗಳಲ್ಲಿ ಪ್ರವಾಸಿಗರು ಹೋದಾಗ ಬಸ್ ಮೇಲೆ ಹತ್ತಿ ತುಂಟಾಟ ತೋರುತ್ತಿದ್ದು, ಇಂತಹ ಸಂದರ್ಭದಲ್ಲಿ ಜಾಗರೂಕರಾಗಿ ಇರಬೇಕು ಎನ್ನುವ ಸಂದೇಶವನ್ನು ಸಫಾರಿಗೆ ಹೋಗುವ ಪ್ರತಿಯೊಬ್ಬ ಚಾಲಕರಿಗೂ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಚಿರತೆಗಳು ಸಾಮಾನ್ಯವಾಗಿ ಕದ್ದು ಮುಚ್ಚಿ ಓಡಾಡುವ ಪ್ರಾಣಿಗಳಾಗಿದ್ದು, ಎಲ್ಲ ಸಂದರ್ಭದಲ್ಲಿ ಮನುಷ್ಯರ ಕಣ್ಣಿಗೆ ಬೀಳುವುದಿಲ್ಲ. ಆದರೆ ಬನ್ನೇರುಘಟ್ಟದಲ್ಲಿ ನಿರ್ಮಾಣ ಮಾಡಲಾಗಿರುವ ಸಫಾರಿಯ ಸ್ಥಳದಲ್ಲಿ ಬಹುತೇಕ ಬಸ್‌ಗಳು ಸಂಚಾರ ಮಾಡುವಾಗ ಎಲ್ಲ ಟ್ರಿಪ್‌ಗಳಲ್ಲಿಯೂ ಚಿರತೆಗಳು ಪ್ರವಾಸಿಗರಿಗೆ ಕಾಣಸಿಗುತ್ತಿವೆ. ರಸ್ತೆ ಪಕ್ಕದಲ್ಲಿಯೇ ಚಿರತೆಗಳು ಓಡಾಡುತ್ತಿರುವ ದೃಶ್ಯ ಪ್ರವಾಸಿಗರಿಗೆ ಮುದ ನೀಡುತ್ತಿದ್ದು, ಅತಿ ಹತ್ತಿರದಲ್ಲೇ ಚಿರತೆಗಳ ತುಂಟಾಟ ನೋಡುತ್ತಿದ್ದಾರೆ.
ಆರು ಮಂದಿ ಪ್ರಾಣಿ ಪಾಲಕರು: ಚಿರತೆ ಸಫಾರಿಯಲ್ಲಿ ಆರು ಮಂದಿ ಪ್ರಾಣಿ ಪಾಲಕರಿದ್ದು ಚಿರತೆಗಳ ನಿರ್ವಹಣೆ ಮಾಡಲಿದ್ದಾರೆ. ಸಫಾರಿಯಲ್ಲಿ ಎರಡು ಪ್ರಾಣಿ ಸಂಕೀರ್ಣ ನಿರ್ಮಿಸಲಾಗಿದೆ. ಪ್ರತಿ ಸಂಕೀರ್ಣದಲ್ಲಿ ಆರು ಪ್ರಾಣಿ ಮನೆಗಳನ್ನು, ಇದಕ್ಕೆ ಹೊಂದಿಕೊಂಡಂತೆ ಸಣ್ಣ ಕ್ರಾಲ್ ಪ್ರದೇಶವನ್ನು ನಿರ್ಮಿಸಲಾಗಿದೆ. ಇದರ ಸುತ್ತಮುತ್ತ ಎಲ್ಲಿಯೂ ಪ್ರವಾಸಿಗರ ಜತೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಆಗಾಗ ಚಿರತೆಗಳು ಯಾವ ಭಾಗದಲ್ಲಿ ಇವೆ? ಎಲ್ಲಿ ಓಡಾಡುತ್ತಿವೆ ಎಂದು ಗಮನಹರಿಸಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಹೆಚ್ಚಿನ ಭದ್ರತೆ: 4.50 ಕೋಟಿ ವೆಚ್ಚದಲ್ಲಿ ಸುಮಾರು 20 ಹೆಕ್ಟೇರ್ ಪ್ರದೇಶವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿಗಾಗಿ ಮೀಸಲಿಡಲಾಗಿದೆ. ಈ ಪ್ರದೇಶದ ಸುತ್ತಲೂ ಚೈನ್ ಲಿಂಕ್ ಮೆಸ್ ಮತ್ತು ರೈಲ್ವೆ ಕಂಬಿಗಳೊಂದಿಗೆ ಭದ್ರ ಪಡಿಸಲಾಗಿದೆ. ಸಫಾರಿ ಪ್ರದೇಶವು ನೈಸರ್ಗಿಕ ಬಂಡೆ ಮತ್ತು ಕಾಡಿನ ವಾತಾವರಣ ಆವರಿಸಿರುವುದರಿಂದ ಸಂಪೂರ್ಣ ಪ್ರದೇಶ ಚಿರತೆಗಳ ಆವಾಸಕ್ಕೆ ಉತ್ತಮವಾಗಿದೆ.
ಚಿರತೆ ಮರಿ ಸಂರಕ್ಷಿಸಿ ಚಿಕಿತ್ಸೆ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ, ವನ್ಯ ಪ್ರಾಣಿಗಳ ಸಂಘರ್ಷದಿಂದಾಗಿ ಗಾಯಗೊಂಡಿರುವ ಅಥವಾ ತಾಯಿಯಿಂದ ಬೇರ್ಪಟ್ಟ ಚಿರತೆ ಮರಿಗಳನ್ನು ಸಂರಕ್ಷಿಸಿ ಚಿಕಿತ್ಸೆ ಮತ್ತು ಪುನರ್ವಸತಿಗೆ ಬನ್ನೇರುಘಟ್ಟಕ್ಕೆ ತರಲಾಗುತ್ತಿದೆ. ಈ ಮರಿಗಳು ಗುಂಪಿನೊಂದಿಗೆ ಹೊಂದಾಣಿಕೆಯಾದ ನಂತರ ಅವುಗಳನ್ನು ಚಿರತೆ ಸಫಾರಿಗೆ ಸ್ಥಳಾಂತರಿಸಿ ಅವುಗಳು ಮೂಲ ಆವಾಸಸ್ಥಾನದಲ್ಲಿಯೇ ಇರುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ವಿಜಯವಾಣಿಗೆ ತಿಳಿಸಿದರು.
ರಾಜ್ಯದ ವಿವಿಧ ಭಾಗದಲ್ಲಿ ತಾಯಿಯಿಂದ ಬೇರ್ಪಟ್ಟ 19 ಚಿರತೆಗಳನ್ನು ಬನ್ನೇರುಘಟ್ಟಕ್ಕೆ ತಂದು ಇಲ್ಲಿನ ವೈದ್ಯರ ತಂಡ ಅವುಗಳನ್ನು ಪಾಲನೆ ಮಾಡಿದೆ. ಅವೆಲ್ಲವೂ ಈಗ ದೊಡ್ಡ ಚಿರತೆಗಳಾಗಿದ್ದು ಸಫಾರಿಗೆ ಬಿಡಲಾಗಿದೆ, ಬೇರೆ ಬೇರೆ ತಾಯಿಯ ಮರಿಗಳಾದರೂ ಒಗ್ಗಟ್ಟಿನಿಂದ ಇವೆ. ಮುನಿನಾಗ ಚಿರತೆ ಪಾಲಕ