ಯಶಸ್ಸಿಗೆ ಯಾವುದೇ ಅಡ್ಡಮಾರ್ಗ ಇರಲ್ಲ

mysore
Published on

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ ಹಾಗೂ ತನ್ನ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ಜತೆಗೆ, ವ್ಯಕ್ತಿತ್ವ ವಿಕಸನ ವೃದ್ಧಿಸಲು ಸಾಮಾನ್ಯ ಜ್ಞಾನ ಇರಬೇಕು ಎಂದು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ‘ಮುಕ್ತಭಂಡಾರ’ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ನಮ್ಮ ಆಲೋಚನೆ ಸಕಾರಾತ್ಮಕವಾಗಿ ಇರಬೇಕು. ಯಶಸ್ಸಿಗೆ ಯಾವುದೇ ಅಡ್ಡಮಾರ್ಗ ಇರುವುದಿಲ್ಲ. ಅದಕ್ಕೆ ಗುರಿ ಮತ್ತು ಪರಿಶ್ರಮ ಬೇಕು. ತೆಗೆದುಕೊಂಡ ಪರೀಕ್ಷೆಯನ್ನು ಆಸಕ್ತಿಯಿಂದ ಯಶಸ್ಸಿಯಾಗಿ ಪೂರ್ಣಗೊಳಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸೋಲಿನಿಂದ ಧೃತಿಗೆಡದೆ ಮತ್ತೆ ಪ್ರಯತ್ನ ನಡೆಸಿ ಸಫಲರಾಗಬೇಕು ಎಂದು ತಿಳಿಸಿದರು.

ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನಹರಿಸಬೇಕು. ನಿಮ್ಮ ಗುರಿಯೆಡೆಗೆ ಸ್ಪಷ್ಟತೆ ಇರಬೇಕು. ತರಬೇತಿಗಳು ವ್ಯಕ್ತಿತ್ವ ವಿಕಸನವನ್ನು ವೃದ್ಧಿಗೊಳಿಸುತ್ತವೆ. ಅವಕಾಶಗಳನ್ನು ಬೆನ್ನತ್ತಿ ಹೋಗಬೇಕು. ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿರುವುದು ಖುಷಿಯ ವಿಚಾರ ಎಂದರು.

ಮನುಷ್ಯ ಮೌಲ್ಯ ಮರೆಯಬಾರದು. ನಾನು ಕೆಎಎಸ್ ಪರೀಕ್ಷೆ ಬರೆಯುವ ಸಮಯಕ್ಕೂ ಇಂದಿಗೂ ಬಹಳಷ್ಟು ವ್ಯತ್ಯಾಸ ಇದೆ. ಇಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ಅಧ್ಯಯನ ನಡೆಸಲು ಸಾಕಷ್ಟು ಪಠ್ಯಪುಸ್ತಕ ಹಾಗೂ ಮಾರ್ಗದರ್ಶನಗಳು ಸಿಗುತ್ತಿವೆ. ಕಾಲೇಜಿನಲ್ಲಿ ಕಲಿತದ್ದು ಕೆಎಎಸ್‌ನಲ್ಲಿ ಬಳಕೆ ಆಗುವುದಿಲ್ಲ ಎಂಬುದು ನೆನಪಿರಲಿ. ನಿಮ್ಮ ಜ್ಞಾನವನ್ನು ಒರೆ ಹಚ್ಚಬೇಕು ಎಂದು ಕಿವಿಮಾತು ಹೇಳಿದರು.

ಕಲಿಕೆ ಮತ್ತು ಬೋಧನಾ ಕ್ರಮದಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಗ್ರಂಥಾಲಯದಲ್ಲಿ ಹೆಚ್ಚು ಪುಸ್ತಕಗಳು ಸಿಗುತ್ತಿವೆ. ಅಲ್ಲಿ ಹೆಚ್ಚು ಸಮಯವನ್ನು ಓದಿನಲ್ಲಿ ಕಳೆಯಬೇಕು. ಯಾವುದನ್ನು ಎಷ್ಟು ಓದಬೇಕೆಂಬ ಯೋಜನಾ ಪಟ್ಟಿ ತಯಾರಿಸಿಕೊಳ್ಳಬೇಕು. ಕೆಎಎಸ್‌ನಲ್ಲಿ ಕೆಲವರಿಗೆ ಯಶಸ್ಸು ಸಿಗುತ್ತದೆ. ಮತ್ತೆ ಕೆಲವರಿಗೆ ಸಿಗುವುದಿಲ್ಲ. ಆದರೆ, ನಿರಂತರ ಪ್ರಯತ್ನದಿಂದ ಯಾವುದಾದರೂ ಒಂದು ಸರ್ಕಾರಿ ಹುದ್ದೆಯನ್ನು ಪಡೆಯಬಹುದು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ದೊಡ್ಡ ಗುರಿ ಹೊಂದಿರಬೇಕು. ತಾವು ಯಾವುದನ್ನು ಸಾಧಿಸಬೇಕು ಎಂಬುದನ್ನು ಮನನ ಮಾಡಿಕೊಂಡು ಅದರಂತೆ ತಯಾರಿ ನಡೆಸಬೇಕು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ, ಅಧ್ಯಯನ ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್ ರಾಜ್ ಮಾತನಾಡಿದರು. ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಕೆ.ಜಿ.ಕೊಪ್ಪಲ್ ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net