ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗಗಳಿಲ್ಲ: ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ. ನವೀನ್‌ಕುಮಾರ್

25
Published on

ಮೈಸೂರು: ಯಶಸ್ಸಿಗೆ ಯಾವುದೇ ಅಡ್ಡ ಮಾರ್ಗಗಳಿಲ್ಲ. ಹಾಗಾಗಿ ಶ್ರಮವಿಲ್ಲದೆ ಸಾಧನೆಯಿಲ್ಲ ಎನ್ನುವುದನ್ನು ಪರೀಕ್ಷಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ. ನವೀನ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಜ್ಞಾನಬುತ್ತಿ ಸಂಸ್ಥೆವತಿಯಿಂದ ಆಯೋಜಿಸಿದ್ದ ಪಿಸಿ-ಪಿಎಸ್‌ಐ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.

ಎಲ್ಲ ಸಾಧಕರ ಹಿಂದೆ ಕಲ್ಲು ಮುಳ್ಳಿನ ಹಾದಿಯ ಚರಿತ್ರೆ ಇರುತ್ತದೆ. ತಾತ್ಕಾಲಿಕ ಸುಖಕ್ಕೆ ಹಂಬಲಿಸದೆ ಜೀವನದ ಸಾರ್ಥಕತೆಯ ಶಾಶ್ವತ ಸುಖಕ್ಕೆ ಇಂದಿನಿಂದಲೇ ದುಡಿಯಲು ಕಂಕಣ ತೊಡಬೇಕು ಎಂದು ಸಲಹೆ ನೀಡಿದರು.

ಸೋಲಿಗೆ ಅಂಜದಿರಿ. ಬಿದ್ದವನು ಇಂದಲ್ಲ ನಾಳೆ ಎದ್ದೇ ಏಳುತ್ತಾನೆ. ಭಯಬಿಟ್ಟಾಗಲೇ ನಿಜವಾದ ಬದುಕು ಆರಂಭವಾಗುವುದು. ಆತ್ಮವಿಶ್ವಾಸ ನಿಮ್ಮನ್ನು ಎಷ್ಟು ಎತ್ತಕ್ಕೆ ಬೇಕಾದರೂ ತೆಗೆದುಕೊಂಡು ಹೋಗುವ ಶಕ್ತಿ ಅದಕ್ಕಿದೆ ಎಂದರು.

ದಾನಗಳಲ್ಲೇ ಅನ್ನ ಮತ್ತು ಅಕ್ಷರ ದಾನ ಬಹುದೊಡ್ಡದು. ನಾಡಿನ ಹೆಸರಾಂತ ಸಿದ್ಧಗಂಗಾ ಮಠ ಹೇಗೆ ಅನ್ನ ಮತ್ತು ಅಕ್ಷರ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆಯೋ ಅದೇ ಹಾದಿಯಲ್ಲಿ ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ನಿಮ್ಮಿಂದ ನಾಳಿನ ಸಮಾಜ ಬಹುನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದನ್ನು ಹುಸಿಗೊಳಿಸಬೇಡಿ. ಹಗಲು-ರಾತ್ರಿ ಕಷ್ಟಪಡಲು ಸಿದ್ಧರಾದರೆ ರೆಡ್ ಕಾರ್ಪೆಟ್ ಸ್ವಾಗತ ನಿಮಗಾಗಿ ಕಾದಿರುತ್ತದೆ. ವಿದ್ಯೆಯೊಂದಿಗೆ ವಿನಯ ಮರೆಯಬೇಡಿ. ಮೊಬೈಲ್ ಬಿಡಿ, ಪುಸ್ತಕ ಹಿಡಿದು ಸಾಧನೆಯತ್ತ ದಾಪುಗಾಲು ಹಾಕಿ ಎಂದರು.

ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಶಂಕರ್ ಮಾತನಾಡಿ, ನಿನಗೇನು ಬೇಕು ಎಂದು ಕೇಳಿಕೊಳ್ಳಿ, ಅದರಲ್ಲಿ ನಂಬಿಕೆಯಿಡಿ ಮತ್ತು ಸಾಧಿಸಿದ ನಂತರ ಅದಕ್ಕೆ ಕೃತಜ್ಞತೆ ಸಲ್ಲಿಸಿ. ಇದೇ ಯಶಸ್ಸಿನ ಗುಟ್ಟು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ. ಸಮಾಜದಲ್ಲಿ ಆರಕ್ಷಕ ವೃತ್ತಿಗೆ ತನ್ನದೇ ಆದ ಮಹತ್ವ ಮತ್ತು ಜವಾಬ್ದಾರಿಯಿದೆ. ಖಾಕಿ ಧರಿಸುವ ಅವಕಾಶ ನಿಮಗೆ ಲಭಿಸಲಿ ಎಂದು ಶುಭ ಹಾರೈಸಿದರು.

ಜ್ಞಾನಬುತ್ತಿ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಕೃ.ಪಾ. ಗಣೇಶ, ಡಾ. ಎಸ್.ಬಿ.ಎಂ. ಪ್ರಸನ್ನ, , ಪ್ರೊ.ಹೊನ್ನಯ್ಯ, ಪ್ರೊ. ಜಯಪ್ರಕಾಶ್, ಪ್ರೊ. ಈ. ಶಿವಪ್ರಸಾದ್, ಕೆ.ವೈ. ನಾಗೇಂದ್ರ, ಡಾ. ಕೃಷ್ಣಕುಮಾರ್, ಯು.ಎಂ. ಶರದರಾವ್, ರಾಜೀವ್ ಶರ್ಮಾ, ಸಿ.ಕೆ. ಕಿರಣ್ ಕೌಶಿಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net