ಯಶಸ್ಸಿಗೆ ಅವಿರತ ಶ್ರಮ ಅಗತ್ಯ

08 YERRISWAMY 01
Published on

ಬಳ್ಳಾರಿ : ಉದ್ಯೋಗಾಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಲು ಅವಿರತವಾಗಿ ಶ್ರಮಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಕನ್ನಡ ಸಂಸ್ಕ್ರತಿ ಇಲಾಖೆಯ ಹೊಂಗಿರಣದಲ್ಲಿ ನಡೆದ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಸಹಯೋಗದಲ್ಲಿ ಕೆಎಎಸ್ ಪರೀಕ್ಷೆಗೆ ಉಚಿತವಾಗಿ ತರಬೇತಿ ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ 5 ತಿಂಗಳ ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ಜಗತ್ತು ಸ್ಪರ್ಧಾತ್ಮಕವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು. ಅಧ್ಯಯನದ ಹೊರತಾಗಿ ಆಕಾಂಕ್ಷಿಗಳು ಸಹನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಶ್ರಮದಿಂದ ಹಿಂದೆ ಸರಿಯಬಾರದು ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ವಿದ್ಯಾರ್ಥಿಗಳು ಹೊಸದನ್ನು ಕಲಿಯುವ ಕುತೂಹಲವನ್ನು ಬೆಳೆಸಿಕೊಳ್ಳಬೇಕು ಮತ್ತು ಆಲೋಚನೆಗಳು ಮತ್ತು ಮಾಹಿತಿಗೆ ತೆರೆದುಕೊಳ್ಳಬೇಕು. ಆಕಾಂಕ್ಷಿಗಳು ತಮ್ಮ ಪ್ರಚಲಿತ ವಿದ್ಯಮಾನಗಳ ಜ್ಞಾನವನ್ನು ಹೆಚ್ಚಿಸಲು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿಗಳು ಕಠಿಣ ಪರಿಶ್ರಮ ಅಥವಾ ವೈಫಲ್ಯದ ಭಯದಿಂದ ಹಿಂಜರಿಯಬಾರದು. ವೈಫಲ್ಯವು ಯಶಸ್ಸಿನ ಮೆಟ್ಟಿಲು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದರು.
ಕೆಎಎಸ್ ಪರೀಕ್ಷಾ ಉಚಿತ ಪೂರ್ವ ತರಬೇತಿಗೆ ಒಟ್ಟು 192 ಆಕಾಂಕ್ಷಿಗಳು ಆಯ್ಕೆಯಾಗಿದ್ದು, ಅವರಿಗೆ ಇಂದಿನಿಂದ 5 ತಿಂಗಳವರೆಗೂ ಬೆಳಗ್ಗೆ 08.30 ರಿಂದ ಮಧ್ಯಾಹ್ನ 02.30 ರವರೆಗೆ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net