ಯುವ ಪೀಳಿಗೆ ಸಂಪ್ರದಾಯ ಅರಿಯಲಿ

30 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಧ್ಯಾತ್ಮ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆ ಪಾಲ್ಗೊಂಡು ನಮ್ಮ ಸಂಪ್ರದಾಯ ಮುಂದುವರೆಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.
ಆಷಾಢ ಮಾಸದ ಪ್ರಥಮ ಏಕಾದಶಿ ನಿಮಿತ್ತ ಇಲ್ಲಿನ ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಅಖಂಡ ಹರಿದಾಸ ಭಜನಾ ಮಹೋತ್ಸದ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಲ್ಲಿ ಯುವ ಪೀಳಿಗೆಗೆ ನಮ್ಮ ಸಂಪ್ರದಾಯ, ನಡೆ ನುಡಿಗಳು ಹಾಗೂ ಭಕ್ತಿ ಮಾರ್ಗದಲ್ಲಿ ನಡೆಯಲು ಅನುಕೂಲವಾಗಲಿದೆ ಎಂದರು.
ಪಂ. ಕೆ.ಎಂ. ಕಲಮಂಗಿ ಮಾತನಾಡಿ, ನಮ್ಮ ಆಚರಣೆಯಲ್ಲಿ ಬರುವ ಏಕಾದಶಿಗಳಲ್ಲಿ ವಿಶೇಷವಾಗಿ ಆಷಾಢ ಏಕಾದಶಿ ಮಹತ್ವ ಪಡೆದಿದೆ ಎಂದ ಅವರು, ಧಾರ್ಮಿಕ ಹಿನ್ನೆಲೆಯಾದ ಮಹಾಭಾರತ ಹಾಗೂ ರಾಮಾಯಣ ಕಾಲದಲ್ಲಿ ಘಟನಾವಳಿಗಳ ಬಗ್ಗೆ ವಿವರಿಸಿ ಆಷಾಢ ಏಕಾದಶಿಯ ಮಹತ್ವ ತಿಳಿಸಿದರು.
ಅಖಿಲ ಭಾರತೀಯ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎನ್.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ವಿಠ್ಠಲ ನಾಮಸ್ಮರಣೆ ನಡೆಸಲಾಯಿತು. ಡಾ. ಪ್ರಸನ್ನ ಗುಡಿ, ದಯಾನಂದ ಭಟ್, ಭಾರ್ಗವಿ ಕುಲಕರ್ಣಿ ದಾಸವಾಣಿ ನಡೆಸಿದರು.
ಪಂ. ಬಂಡಾಚಾರ ಗಿಡದಹುಬ್ಬಳ್ಳಿ, ಎಚ್. ವಾದಿರಾಜಾಚಾರ್, ಡಾ. ಶ್ರೀಧರ ಕುಲಕರ್ಣಿ, ಡಾ. ಎಚ್.ಎ. ಕಟ್ಟಿ, ಕೆ.ಆರ್. ದೇಸಾಯಿ, ಎಸ್.ಬಿ. ದ್ವಾರಪಾಲಕ, ರಾಧಾ ಶಾಮರಾವ್, ಇಂದುಮತಿ ರಾಘವೇಂದ್ರ, ಅನುರಾಧಾ ಕುಲಕರ್ಣಿ, ರಮೇಶ ಜಮಾದಾರ, ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ವಿಠ್ಠಲ ಮಂದಿರದ ಗೌರವ ಅಧ್ಯಕ್ಷ ಎಸ್.ಬಿ. ಗುತ್ತಲ ಸ್ವಾಗತಿಸಿದರು. ಸರೋಜಾ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net