ಯಳಂದೂರು ಶೇ. 99ರಷ್ಟು ಗ್ಯಾರಂಟಿ ಪ್ರಗತಿ

30 yelandur 02
Published on

ಯಳಂದೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ನಮ್ಮ ಜಿಲ್ಲೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಶೇ. 99 ರಷ್ಟು ಪ್ರಗತಿ ಸಾಧಿಸುವ ಮೂಲಕ ಗಮನ ಸೆಳೆದಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಿನಕಹಳ್ಳಿ ಎಸ್.ಪ್ರಭುಪ್ರಸಾದ್ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ನಮ್ಮ ತಾಲೂಕು ಚಿಕ್ಕ ತಾಲೂಕಾಗಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಗೃಹಲಕ್ಷ್ಮಿಯೋಜನೆಯಡಿ ತಾಲೂಕಿನಲ್ಲಿ 22,499 ಫಲಾನುಭವಿಗಳಿದ್ದಾರೆ. ಇದರಲ್ಲಿ 20,439 ಜನಕ್ಕೆ ಈಗಾಗಲೇ ಏಪ್ರಿಲ್ ತಿಂಗಳ ಹಣ ಜಮೆಯಾಗಿದೆ. ಈ ಪ್ರಕ್ರಿಯೆ ಮುಂದುವರಿದಿದ್ದು, ಉಳಿದವರಿಗೂ ಶೀಘ್ರದಲ್ಲೇ ಹಣ ಬರಲಿದೆ. ಕೇವಲ 5 ಜನರಿಗೆ ಮಾತ್ರ ಎನ್‌ಪಿಸಿಐ ಇನ್‌ಆಕ್ಟಿವ್ ಆಗಿದೆ. ಇವರಿಗೆ ಇ ಕೆವೈಸಿ ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಗೃಹಜ್ಯೋತಿ ಯೋಜನೆಯಲ್ಲಿ 19,412 ಅರ್ಹ ಗ್ರಾಹಕರಿದ್ದಾರೆ. ಇದರಲ್ಲಿ ಒಟ್ಟು 19,355 ಜನ ಈಗಾಗಲೇ ನೋಂದಣಿ ಮಾಡಿಸಿದ್ದು ಶೇ. 99.71 ರಷ್ಟು ಪ್ರಗತಿ ಸಾಧಿಸಲಾಗಿದೆ. ಯುವನಿಧಿಗೆ 311 ಜನರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಅಲ್ಲದೆ ಅನ್ನಭಾಗ್ಯದಲ್ಲೂ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಲಕ್ಷಾಂತರ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಮೈಸೂರಿನಿಂದ ರಾತ್ರಿ ಹೊರಡುವ ಬಸ್ ನಿಂತಿದ್ದು, ಇದಕ್ಕೆ ಮತ್ತೆ ಚಾಲನೆ ನೀಡುವಂತೆ ಸಂಬಂಧಪಟ್ಟ ಡಿಪೋ ಮ್ಯಾನೇಜರ್‌ಗೆ ಪತ್ರ ಬರೆಯಲಾಗಿದೆ. ಹೊನ್ನೂರು, ಕೆಸ್ತೂರು ದುಗ್ಗಹಟ್ಟಿ ಮಾರ್ಗವಾಗಿ ಕೊಳ್ಳೇಗಾಲದಿಂದ ಯಳಂದೂರಿಗೆ ಬಸ್ ಓಡಿಸುವಂತೆಯೂ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎಂ. ಶಿವಣ್ಣ, ನಂಜುಂಡಸ್ವಾಮಿ, ಭಾಗ್ಯ, ಅನಿತಾ, ಶಿವರಾಜು, ಕೆ. ವಿರೂಪಾಕ್ಷ, ವೈ.ಆರ್. ಮಂಜುನಾಥ, ವೈ.ಎಂ. ನಾಗಣ್ಣ, ಅಸ್ಲಂಪಾಷ, ಡಿ. ನಾಗರಾಜು, ಎನ್. ಮಹೇಶ್ ಇಒ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಉಮೇಶ್, ಸೆಸ್ಕ್‌ನ ಎಇಇ ಲಿಂಗರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಕಲೇಶ್ವರ್, ಆಹಾರ ನಿರೀಕ್ಷಕ ಬಿಸಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net