

ಯಳಂದೂರು: ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಬಾಬು ಜಗಜೀವನರಾಮ್ ಅವರ 116 ನೇ ಜಯಂತಿ ಕಾರ್ಯಕ್ರಮವು ಬುಧವಾರ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನೆರವೇರಿತು.
ತಹಸೀಲ್ದಾರ್ ಶಿವರಾಜು ಮಾತನಾಡಿ, ಬಾಬು ಜಗಜೀವನರಾಮ್ ದೇಶ ಕಂಡ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಹಸಿರು ಕ್ರಾಂತಿ ಮಾಡುವ ಮೂಲಕ ದೇಶದ ಆಹಾರ ಸಮಸ್ಯೆಯನ್ನು ತಹಬದಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಕಾಲದಲ್ಲಿ ಜಲಕ್ರಾಂತಿಯೂ ಆಗಿದ್ದು, ಅನೇಕ ಅಣೆಕಟ್ಟುಗಳು ನಿರ್ಮಾಣವಾಗಿ ಭಾರತ ದೇಶ ಆಹಾರ ಸ್ವಾವಲಂಬನೆಯನ್ನು ಸಾಧಿಸಿತು. ಇಂತಹ ಮಹಾನ್ ನಾಯಕರು ನಮ್ಮ ದೇಶದ ಹೆಮ್ಮೆಯಾಗಿದ್ದಾರೆ. ರೈಲ್ವೆ ಇಲಾಖೆಯನ್ನು ಸೇವಾ ಕ್ಷೇತ್ರವೆಂದು ಪರಿಗಣಿಸಿದ್ದರು. ಬಾಂಗ್ಲಾ ವಿಮೋಚನೆ, ಪಾಕಿಸ್ತಾನದೊಂದಿಗೆ ಯುದ್ಧವನ್ನು ಗೆಲ್ಲುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ಅಂದಿನ ಜಾತಿಯತೆಯನ್ನು ಹೋಗಲಾಡಿಸುವಲ್ಲಿ ಇವರು ಅನುಭವಿಸಿದ ನೋವು, ಅದನ್ನು ತೊಲಗಿಸುವಲ್ಲಿ ನಡೆಸಿದ ಹೋರಾಟ ನಮಗೆ ಪಾಠವಾಗಬೇಕಿದೆ ಎಂದರು.
ಭಾರತೀಯ ಸೇವಾದಳದ ತಾಲೂಕು ಅಧ್ಯಕ್ಷ ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ರೇವಣ್ಣ, ಕಂದಹಳ್ಳಿನಾರಾಯಣ, ರುದ್ರಯ್ಯ, ಮರಪ್ಪ, ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ಎಎಸ್‌ಐ ಶೇಖರ್ ಮುಖ್ಯಾಧಿಕಾರಿ ರವಿಕೀರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.