

ಬೆಳಗಾವಿ: ಮೂರು ಜಿಲ್ಲೆಗಳ ಕೇಂದ್ರ ಸ್ಥಾನ, ವಾಣಿಜ್ಯ ವಲಯವಾಗಿರುವ ಯರಗಟ್ಟಿ ಪಟ್ಟಣದ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸವದತ್ತಿ ಮತ್ತು ಮುರಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಗಣನೀಯ ಏರಿಕೆಯಾಗಿವೆ. ಅಲ್ಲದೆ, ರೈತಪರ ಸೇರಿ ವಿವಿಧ ಸಂಘಟನೆಗಳ ನಿರಂತರ ಹೋರಾಟ, ಕಚೇರಿಗಳ ಮುತ್ತಿಗೆ ಹಾಕುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯ 6, ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ 33 ಸೇರಿಸಿ ಒಟ್ಟು 39 ಗ್ರಾಮ ಒಳಗೊಂಡಂತೆ ಯರಗಟ್ಟಿ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಠಾಣೆಗೆ ಪಿಐ-1, ಪಿಎಸ್‌ಐ-4, ಎಎಸ್‌ಐ-6, ಸಿಎಚ್‌ಸಿ-18, ಸಿಪಿಸಿ-36 ಒಟ್ಟು 65 ಹುದ್ದೆಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಯರಗಟ್ಟಿಗೆ ಪೂರ್ಣಪ್ರಮಾಣದ ಪೊಲೀಸ್ ಠಾಣೆಗಾಗಿ 2012ರಿಂದ ಹೋರಾಟ ನಡೆದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸುವ ಮೂಲಕ ದಶಕಗಳ ಕನಸು ನನಸು ಮಾಡಿದೆ ಎಂದು ಹೋರಾಟಗಾರರು ಅಭಿನಂದಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾತುಕೊಟ್ಟಂತೆ ಯರಗಟ್ಟಿ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಮಾತು ಉಳಿಸಿಕೊಂಡಿದ್ದೇನೆ. ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. | ವಿಶ್ವಾಸ ವೈದ್ಯ ಶಾಸಕ