ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಚಿರತೆಯೊಂದು ಕರುವನ್ನು ಬಲಿ ಪಡೆದಿರುವ ಪರಿಣಾಮ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಕೆಲವು ದಿನಗಳಿಂದ ದಾಸನಹುಂಡಿ, ರಂಗನಾಥಪುರ, ಯರಗಂಬಳ್ಳಿ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ಹಸು, ಕರು, ಸಾಕುನಾಯಿಗಳ ಮೇಲೆ ದಾಳಿ ಮಾಡಿದೆ. ಕತ್ತಲಾದ ಸಮಯದಲ್ಲಿ ಚಿರತೆ ಕಾರ್ಯಾಚರಣೆ ಆರಂಭಿಸುತ್ತದೆ. ರೈತರು ಹಾಗೂ ಗ್ರಾಮಸ್ಥರು ಜೀವಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯರಗಂಬಳ್ಳಿ ಗ್ರಾಮದ ಕರಿಕಲ್ಲು ಕ್ವಾರೆ ಬಳಿ ಜಮೀನಿನಲ್ಲಿ ಬೋನನ್ನು ಇರಿಸಿದ್ದು, ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇನ್ನಷ್ಟು ಕಡೆ ಇಲಾಖೆಯವರು ಬೋನನ್ನು ಇರಿಸಿ ಇದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಚುರುಕುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.