ಯರಂಬಾಡಿಯ ಮಿನ್ನತ್ತುಹಳ್ಳ ಡ್ಯಾಂ ಸೋರಿಕೆ

14 HANUR 1
filter: 109; fileterIntensity: 0.8; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.35666683, 0.565625);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: 0;weatherinfo: null;temperature: 40;
Published on

ಹನೂರು: ಕ್ಷೇತ್ರದ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯದ್ದೇ ಈಗ ಒಂದು ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಉತ್ತಮ ಬೆಳೆ ಬೆಳೆಯಲು ಭೂಮಿ ತಾಯಿ ಮಕ್ಕಳು ಇನ್ನಿಲ್ಲದ ಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿಯ ಮಿನ್ನತ್ತುಹಳ್ಳ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಸೋರಿಕೆಯಾಗುತ್ತಿದೆ. ಹಳ್ಳದ ಮೂಲಕ ಪೋಲಾಗುತ್ತಿದ್ದು, ಈ ಬಗ್ಗೆ ತುರ್ತು ಕ್ರಮ ವಹಿಸುವುದು ಅಗತ್ಯವಾಗಿದೆ.

ಹೂಗ್ಯಂ ಗ್ರಾಮ ತಮಿಳುನಾಡು ಹಾಗೂ ಕರ್ನಾಟಕದ ಗಡಿ ಭಾಗದಲ್ಲಿದೆ. ಇಲ್ಲಿನ ರೈತರಿಗೆ ಮಿನ್ನತ್ತುಹಳ್ಳ ಜಲಾಶಯ ಜೀವನಾಡಿಯಾಗಿದೆ. ಈ ಜಲಾಶಯವನ್ನು 1983ರಲ್ಲಿ ನಿರ್ಮಿಸಲಾಗಿದೆ. ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ಜಲಾಶಯವನ್ನು ಸೇವೆಗೆ ಸಮರ್ಪಣೆ ಮಾಡಿದ್ದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಇದು ಒಳಪಟ್ಟಿದೆ.

ತಮಿಳುನಾಡಿನ ಗುಂಡಾರೆ, ಮಾಸನಪಾಳ್ಯ ಹಾಗೂ ತಾಲೂಕಿನ ಮಿಣ್ಯಂ, ಪಿ.ಜಿ ಪಾಳ್ಯ, ಬೈಲೂರು ಭಾಗದಲ್ಲಿ ಉತ್ತಮ ಮಳೆಯಾದರೆ ಈ ಜಲಾಶಯವು ಭರ್ತಿಯಾಗುತ್ತದೆ. ಇದರಿಂದ ಈ ಭಾಗದ ಪೆದ್ದನಪಾಳ್ಯ, ಕೂಡಲೂರು, ನೆಲ್ಲೂರು, ಅಂಚಿಪಾಳ್ಯ, ಜಲ್ಲಿಪಾಳ್ಯ ಹಾಗೂ ಹೂಗ್ಯಂ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ ದೊರಕುತ್ತದೆ. ಈ ಭಾಗದ ಮುಖ್ಯ ಜಲ ಮೂಲದಲ್ಲೇ ಜಲ ಸೋರಿಕೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಈ ಡ್ಯಾಂ ನಿಂದ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿನ ವನ್ಯಜೀವಿಗಳಿಗೆ ನೀರಿನ ಆಸರೆ ದೊರಕುತ್ತಿದೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಕಾರಣವಾಗಿದೆ.

ಮಳೆ ಬಿದ್ದರೆ ಮಾತ್ರ ಭರ್ತಿ:

ಈ ಜಲಾಶಯವು ಉತ್ತಮ ಮಳೆಯಾದರಷ್ಟೇ ಭರ್ತಿಯಾಗುತ್ತದೆ. ಹಾಗಾಗಿ 2 ವರ್ಷದ ಹಿಂದೆ ಸಮರ್ಪಕ ಮಳೆಯಿಲ್ಲದ ಪರಿಣಾಮ ನೀರಿನ ಪ್ರಮಾಣ ತೀವ್ರ ಕ್ಷೀಣವಾಗಿತ್ತು. ಇದರಿಂದ ಈ ಭಾಗದ ರೈತರು ತೊಂದರೆಯನ್ನು ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಾದರಿಂದ ಜಲಾಶಯವು ಭರ್ತಿಯಾಗಿದ್ದು, ಕಳೆದ ತಿಂಗಳು ಶಾಸಕ ಎಂ.ಆರ್ ಮಂಜುನಾಥ್ ಬಾಗಿನ ಅರ್ಪಿಸಿದ್ದರು. ಕಾಲುವೆಗಳ ಮೂಲಕ ಜಮೀನುಗಳಿಗೆ ಈ ವರ್ಷ ನೀರು ಹರಿಸುತ್ತಿರುವುದು ರೈತರ ಪಾಲಿಗೆ ವರದಾನವಾಗಿದೆ. ಹಾಗಾಗಿ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರು ಪೋಲಾಗದಂತೆ ಸಂರಕ್ಷಿಸುವುದು ಅತ್ಯಗತ್ಯ. ಇದರಿಂದ ಈ ಭಾಗದ ಜನರಿಗೆ ಹೆಚ್ಚಿನ ಫಸಲು ಪಡೆಯಲು ಅನುಕೂಲವಾಗಲಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ನೀರು ಡ್ಯಾಂನಿಂದ ಸೋರಿಕೆಯಾಗುತ್ತಿದೆ. ಹಳ್ಳದ ಮೂಲಕ ಹರಿದು ವ್ಯರ್ಥವಾಗುತ್ತಿರುವ ಬಗ್ಗೆ ರೈತರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೋಲಾಗುತ್ತಿದೆ ಜಲ:

ಜಲಾಶಯವು ಭರ್ತಿಯಾಗಿರುವ ಕಾರಣ ಕಾಲುವೆಗಳ ಮೂಲಕ ನೀರನ್ನು ನಿಯಮಿತವಾಗಿ ಹರಿಸಲಾಗುತ್ತಿದೆ. ಇದರಿಂದ ಕೃಷಿಗೆ ಅನುಕೂಲವಾಗುತ್ತಿದೆ. ಆದರೆ ಜಲಾಶಯದಲ್ಲಿ ಸಮರ್ಪಕ ನಿರ್ವಹಣೆ ಕೊರತೆ ಕಾಡುತ್ತಿದೆ. ಪರಿಣಾಮ ಕೃಷಿಗೆ ಬಳಕೆಯಾಗಬೇಕಾದ ನೀರು ಜಲಾಶಯದ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಬಂಡೆಯ ಬಳಿ ಹರಿದು ವ್ಯರ್ಥವಾಗುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ನೀರಿನ ಸಂಗ್ರಹಣಾ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ನೀರಾವರಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ನೀರು ಪೋಲಾಗುತ್ತಿರುವ ಬಗ್ಗೆ ಗಮನಹರಿಸಿಲ್ಲ. ಸೋರಿಕೆ ತಡೆಗಟ್ಟುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ.

ಮುಂದಿನ ದಿನಗಳಲ್ಲಿ ಈ ಭಾಗದ ಕೃಷಿಕರ ಪಾಲಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹಾಗಾಗಿ ವ್ಯರ್ಥವಾಗುತ್ತಿರುವ ನೀರನ್ನು ತಡೆಗಟ್ಟುವುದು ತುರ್ತು ಅಗತ್ಯವಾಗಿದೆ. ಈ ಬಗ್ಗೆ ರೈತರಿಂದ ಒತ್ತಾಯ ಕೇಳಿ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಕಾಳಜಿ ತೋರಬೇಕಿದೆ.

ತಳಭಾಗದಲ್ಲಿ ನಿರ್ಮಾಣವಾಗುತ್ತಿವೆ ರಂಧ್ರಗಳು

ಈ ಜಲಾಶಯದಿಂದ ನೀರು ಪೋಲಾಗುತ್ತಿರುವುದು ಒಂದಡೆಯಾದರೆ, ಮತ್ತೊಂದೆಡೆ ಭರ್ತಿಯಾದ ವೇಳೆ ನೀರು ಹೊರಹೋಗಲು ಡ್ಯಾಂನ ತಳ ಭಾಗಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ತಡೆಗೋಡೆಗಳು ಶಿಥಿಲಗೊಂಡಿವೆ. ಇಲ್ಲಿ ರಂಧ್ರಗಳು ನಿರ್ಮಾಣವಾಗುತ್ತಿವೆ. ಅಧಿಕಾರಿಗಳು ಇದನ್ನು ರಿಪೇರಿ ಪಡಿಸುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ. ಅಧಿಕ ತೇವಾಂಶದಿಂದ ಕೂಡಿರುವ ಈ ಗೋಡೆಗಳು ಮುಂದೆ ಬಿರುಕುಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ದುರಂತ ಎದುರಾಗುವ ನಿರೀಕ್ಷೆ ಇದೆ. ಹಾಗಾಗಿ ತಾಂತ್ರಿಕ ಪರಿಣತರ ಸಲಹೆ ಪಡೆದು ರಿಪೇರಿ ಕಾರ್ಯವನ್ನು ಕೈಗೊಳ್ಳುವುದು ಅಗತ್ಯವಾಗಿದೆ.

ಕುಡುಕರ ಅಡ್ಡೆಯಾದ ಆವರಣ ಈ ಜಲಾಶಯದಲ್ಲಿ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ಭದ್ರತೆ ಇಲ್ಲದಂತಾಗಿದೆ. ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಈ ಜಲಾಶಯದ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಕುಡುಕರದ್ದೇ ಹಾವಳಿ ಹೆಚ್ಚಾಗಿದೆ. ಡ್ಯಾಂ ತಳಭಾಗದ ಆವರಣ, ಆಸುಪಾಸು ಹಾಗೂ ವೀಕ್ಷಣಾ ಗೋಪುರ ಸಂಪೂರ್ಣ ಪಾನ ಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ. ಮದ್ಯದ ಖಾಲಿ ಪೌಚ್, ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೇ ಇಲ್ಲಿ ಬಿದ್ದಿದೆ. ಅನೈರ್ಮಲ್ಯದ ಜತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಇದು ಬದಲಾಗಿದೆ. ಇದಕ್ಕೆ ಕಡಿವಾಣ ಹಾಕುವುದರ ಮೂಲಕ ನೈರ್ಮಲ್ಯ ಕಾಪಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜಲಾಶಯದ ಆವರಣದ ಸೌಂದರ್ಯ ಕಾಪಾಡಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

1983ರಲ್ಲಿ ನಿರ್ಮಾಣವಾದ ಮಿನ್ನತ್ತುಹಳ್ಳ ಜಲಾಶಯವು ಈ ಭಾಗದ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಈ ವರ್ಷ ಡ್ಯಾಂ ಭರ್ತಿಯಾಗಿರುವುದು ಸಂತಸದ ವಿಷಯ. ಆದರೆ ಡ್ಯಾಂನಲ್ಲಿ ನೀರು ಸೋರಿಕೆಯಾಗುತ್ತಿರುವುದು ಬೇಸರದ ಸಂಗತಿ. ಜತೆಗೆ ಕಟ್ಟಡದ ಅಲ್ಲಲ್ಲಿ ರಂಧ್ರಗಳು ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ವೆಂಕಟಾಚಲ ರೈತ ಮುಖಂಡ, ಕೂಡಲೂರು ಗ್ರಾಮ ಸಾಮಾನ್ಯವಾಗಿ ಎಲ್ಲ ಜಲಾಶಯಗಳಲ್ಲೂ ಈ ರೀತಿ ನೀರು ಸೋರಿಕೆಯಾಗುವುದು ಸಾಮಾನ್ಯ. ಅದರಂತೆಯೇ ಇಲ್ಲೂ ಆಗುತ್ತಿದೆ. ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ತಳಭಾಗದ ಗೋಡೆಗಳಲ್ಲಿ ರಂಧ್ರಗಳು ನಿರ್ಮಾಣವಾಗಿರುವ ಸಂಬಂಧ ರಿಪೇರಿ ಹಾಗೂ ಜಲಾಶಯದ ಸಮಗ್ರ ಅಭಿವೃದ್ಧಿಗೆ ಅನುದಾನಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅಭಿಲಾಷ್ ಎಇಇ, ಸಣ್ಣ ನೀರಾವರಿ ಇಲಾಖೆ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net