

ಹನೂರು: ಸಮರ್ಪಕ ರಸ್ತೆ ಇಲ್ಲದ ಪರಿಣಾಮ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಹಾಗಾಗಿ, ಮುಂಬರುವ ವಿಧಾನಸಭೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಯರಂಬಾಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಲೊಕ್ಕನಹಳ್ಳಿ ಹೋಬಳಿ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಂಬಾಡಿಯಿಂದ ಕೋಬೆದೊಡ್ಡಿಗೆ ತೆರಳಲು ರಸ್ತೆ ಇಲ್ಲ. ಈ ಭಾಗದಲ್ಲಿ ಜಮೀನನ್ನು ಹೊಂದಿದ್ದು, ಸಂಚರಿಸಲು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಉಳುಮೆ ಮಾಡಿಸಲು ಟ್ರಾೃಕ್ಟರ್ ಸಹ ಜಮೀನುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ವರ್ಷದಿಂದಲೂ ಕಷ್ಟ ಪಡುತ್ತಿದ್ದೇವೆ. ರಸ್ತೆ ನಿರ್ಮಿಸಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರಾದ ಮಲ್ಲೇಶ, ಮಾದರಾಜು, ಮಲ್ಲಾಜಮ್ಮ, ಮಾದೇವ, ವೀರ, ಚಾಮರಾಜು, ವೆಂಕಟರಾಮು, ವೀರಭದ್ರ, ಮುತ್ತುರಾಜಮ್ಮ, ಈಶ್ವರಿ ಮತ್ತಿತರರಿದ್ದರು.