

ತುಮಕೂರು: ಯಮನ್ ದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ಪರವಾಗಿ ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ತ ಕುಟುಂಬದೊಂದಿಗೆ ಮಾತನಾಡಿ, ಗಲ್ಲು ಶಿಕ್ಷೆಯನ್ನು ಸದ್ಯಕ್ಕೆ ತಡೆಹಿಡಿಯುವಂತೆ ಮಾಡಿದ ಡಾ.ಮೌಲಾ ಷರೀಫ್ ಕಾರ್ಯ ಶ್ಲಾಘನೀಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಪ್ರಶಂಸಿಸಿದರು.
ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿದ್ದ ಡಾ.ಮೌಲಾ ಷರೀಫ್ ಅವರನ್ನು ಪ್ರಾರ್ಥನೆಯ ಸಮಯದಲ್ಲಿ ಅಭಿನಂದಿಸಿ ಮಾತನಾಡಿದ ಸ್ವಾಮೀಜಿ, ಡಾ.ಮೌಲಾ ಷರೀಫ್ ಅವರದು ಮಾತೃ ಹೃದಯ. ಎಲ್ಲರೂ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುಬೇಕೆಂಬ ಕನಸು ಹೊತ್ತಿರುವ ಈ ಗುಣ ಇತರರಿಗೆ ಮಾದರಿ ಎಂದರು. ಡಾ.ಮೌಲಾ ಷರೀಫ್ ಹಿಂದೂಸ್ತಾನ್ ಗೋಲ್ಡ್ ಕಂಪನಿ ಮಾಲೀಕರಾಗಿ ಬಡವರು, ಅಶಕ್ತರು, ನಿರ್ಗತಿಕರಿಗೆ ಸಾಕಷ್ಟು ಸೇವೆ ಒದಗಿಸುತ್ತಾ ಬಂದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಶ್ರೀಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮಿಗಳ ಗದ್ದುಗೆಗೆ ಅವರ ಪುಣ್ಯ ಸ್ಮರಣೆಯ ದಿನದಂದು ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಿ ಶ್ರೀಮಠದ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಯಮನ್ ದೇಶದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನರ್ಸ್ ನಿಮಿಷಾ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಯಲು ಕೇಂದ್ರ ಸರ್ಕಾರ ಸೇರಿ ಹಲವಾರು ಸಂಘ&ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ, ಡಾ.ಮೌಲಾ ಷರೀಫ್ ಅವರು ಖುದ್ದು ಯಮನ್ ದೇಶದಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ, ಪ್ರಕರಣವನ್ನು ಕ್ಷಮಿಸುವಂತೆ ಮನವೊಲಿಸಿದ್ದು, ಇದು ಎರಡು ದೇಶಗಳ ನಡುವಿನ ಭಾಂಧವ್ಯ ಮತ್ತಷ್ಟು ಹೆಚ್ಚಿಸಿದೆ ಎಂದರು. ಡಾ.ಮೌಲಾ ಷರೀಫ್ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ಒಂದು ದಿವ್ಯ ಶಕ್ತಿ ಇದೆ, ಇಲ್ಲಿಗೆ ಬರುವ ವ್ಯಕ್ತಿ
ಆರಂಭದಲ್ಲಿ ಹಾವಾಗಿದ್ದರೂ, ಹೊರಗೆ ಹೋಗುವ ಹೊತ್ತಿಗೆ ಹೂವಾಗಿ ಮರುಳುವುದನ್ನು ಕಾಣಬಹುದು. ಭಾರತೀಯ ಸಂಸತಿಯಲ್ಲಿ ಸ್ವರ್ಗ, ನರಕಗಳ ಪರಿಕಲ್ಪನೆಯಿದೆ. ಅವು ಇದೆಯೋ, ಇಲ್ಲವೋ ಗೊತ್ತಿಲ್ಲ. ಕಲಿಯುಗದ ನಿಜವಾದ ಸ್ವರ್ಗ ಎಂದರೆ ಅದು ಸಿದ್ಧಗಂಗಾ ಮಠ. ನನ್ನೆಲ್ಲಾ ಸಮಾಜ ಸೇವೆಗೆ ಸಿದ್ಧಗಂಗಾ ಮಠವೂ ಕಾರಣ ಎಂದರು.