ಯತ್ನಾಳ್​ರನ್ನು ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತೇನೆ

Published on

ಹುಬ್ಬಳ್ಳಿ: ನನಗೆ ಜವಾಬ್ದಾರಿ ಕೊಟ್ಟರೆ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ರನ್ನು ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತೇನೆ ಎಂದು ಶಾಸಕ, ವಾಕರಸಾ ಸಂಸ್ಥೆ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ಯತ್ನಾಳರನ್ನು ಕರೆದುಕೊಂಡು ಬನ್ನಿ ಎಂದರೆ, ನಾವು ಸ್ವಾಗತ ಮಾಡುತ್ತೇವೆ. ಅವರನ್ನು ಉಚ್ಚಾಟಿಸಿರುವುದು ಬಿಜೆಪಿಯ ಆಂತರಿಕ ವಿಷಯ ಎಂದರು.

ಪ್ರಯಾಣ ದರ ಏರಿಕೆಯಿಂದ ಜನರಿಗೆ ಹೊರೆ ಆಗಿಲ್ಲ. ನಮಗೂ ಇತಿ ಮಿತಿ ಇರುತ್ತದೆ. ಹೊಸ ಬಸ್ ನಿಲ್ದಾಣ ನಿರ್ವಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ನೋ ಪ್ರಾಫಿಟ್, ನೋ ಲಾಸ್​ನಲ್ಲಿ ವಾಕರಸಾ ಸಂಸ್ಥೆಯನ್ನು ನಡೆಸಬೇಕು. ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ ಬಗ್ಗೆ ಏಪ್ರಿಲ್ 5ರಂದು ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಉಪಯೋಗವಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಯಾರು ವಿರೋಧ ಮಾಡುತ್ತಿದ್ದರೋ, ಅವರೇ ಮಹಾರಾಷ್ಟ್ರ, ದೆಹಲಿ ಚುನಾವಣೆಯಲ್ಲಿ ನಕಲು ಮಾಡಿದ್ದಾರೆ ಎಂದು ಹೇಳಿದರು.

ಹನಿಟ್ರ್ಯಾಪ್ ವೈಯಕ್ತಿಕವಾದದ್ದು. ಅದಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಸದನದಲ್ಲಿ ಹನಿಟ್ರ್ಯಾಪ್​ಗೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಅವರ ಹೆಸರು ತೆಗೆದುಕೊಂಡಿದ್ದು ಯತ್ನಾಳ್. ಅದಕ್ಕೆ ರಾಜಣ್ಣ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net