ಯತ್ನಾಳ್‌ರದು ಸಾವಿರಾರು ಕೋಟಿ ರೂ. ಮಾತು

CTD CMM
Published on

ಚಿತ್ರದುರ್ಗ: ಅವರದ್ದು ಐದು-ಹತ್ತು ಕೋಟಿ ರೂ. ಮಾತೇ ಇಲ್ಲ. ಏನಿದ್ದರೂ ಸಾವಿರಾರು ಕೋಟಿ ರೂ. ಎಂದು ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್ ವಿರುದ್ಧ ವ್ಯಂಗ್ಯವಾಡಿದರು.
ಚಳ್ಳಕೆರೆಯಲ್ಲಿ ಸೋಮವಾರ ಶಾಸಕ ಟಿ.ರಘುಮೂರ್ತಿ ಪುತ್ರಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಹಿಂದ ವರ್ಗದ ಕೋಟ್ಯಂತರ ರೂ. ಗಳನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂಬ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಒಂದು ಸಾವಿರ ಕೋಟಿ ಕೊಟ್ಟರೆ ಸಿಎಂ ಆಗುತ್ತಾರೆಂದು ಹೇಳಿದ್ದವರು ಯಾರು? ಹಾಗಿದ್ದರೆ ಅದು ಕಪ್ಪು ಹಣವಲ್ಲವಾ? ಸರ್ಕಾರ ಬೀಳಿಸಲು ಖರ್ಚು ಮಾಡುವ ಹಣ ಎಲ್ಲಿಂದ ತರುತ್ತಾರೆ ?ಎಂಬಿತ್ಯಾದಿ ಪ್ರಶ್ನೆ ಹಾಕಿದರಲ್ಲದೆ ಯತ್ನಾಳರದು ಬರೀ ಸಾವಿರಾರು ಕೋಟಿ ರೂ.ಮಾತೇ ಎಂದು ಯತ್ನಾಳ್ ಕಾಲೆಳೆದರು.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಗೆಲುವು ಖಚಿತ. ಮಂಗಳವಾರ ಬೆಳಗ್ಗೆಯೊಳಗಾಗಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.
ಮಾಜಿ ಸಚಿವ ಸಿಪಿ ಯೋಗೀಶ್ವರ್ ನಮ್ಮ ಸಂಪರ್ಕದಲ್ಲಿಲ್ಲ. ಜೆಡಿಎಸ್‌ನವರು ಬಾಯಿಗೆ ಬಂದಂತೆ ಮಾತಾಡುತ್ತಾರೆ. ಅವರು ಮೊದಲು ಚನ್ನಪಟ್ಟಣದಲ್ಲಿ ಅಭ್ಯರ್ಥಿ ಪ್ರಕಟಿಸಲಿ ಎಂದು ಹೇಳಿದರು. ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಿದೆ. ಆದರೆ ಬೆಳೆಗಳಿಗೆ ತೊಂದರೆ ಇಲ್ಲ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net