ಯತ್ನಾಳ್ ಹೇಳಿಕೆಗೆ ಖಂಡನೆ

Basavadala
Published on

ಚಿತ್ರದುರ್ಗ: ವಿಶ್ವಗುರು ಬಸವಣ್ಣ ಲಿಂಗೈಕ್ಯ ವಿಚಾರ ಪ್ರಸ್ತಾಪಿಸಿ, ಹೊಳೆಗೆ ಹಾರಿದ್ದಾರೆಂದು ಹಗುರವಾಗಿ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಸವಣ್ಣ ಅವರ ಕುರಿತು ಯತ್ನಾಳ್‌ಗೆ ಇತಿಹಾಸ ಪ್ರಜ್ಞೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅದೇ ಗತಿ ನಿಮಗೂ ಬರುತ್ತದೆಂದು ಒಂದು ಧರ್ಮವನ್ನು ಅವಹೇಳನ ಮಾಡಿದ್ದಾರೆ. ಹೀಗಾಗಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಜನಪ್ರತಿನಿಧಿಯಾಗಿ ಅವರ ಹೇಳಿಕೆಗಳು ಕೋಮುಗಲಭೆಗೂ ಕಾರಣವಾಗುತ್ತಿದೆ. ಒಂದು ಸಮಾಜದ ಪ್ರತಿನಿಧಿ ಎಂಬಂತೆ ಮಾತನಾಡುವುದಲ್ಲದೆ, ಅದರ ಸ್ವಾಸ್ಯ ಹಾಳು ಮಾಡುತ್ತಿದ್ದಾರೆ. ಧರ್ಮಪಿತ ಬಸವಣ್ಣನ ಅನುಯಾಯಿಗಳ ಮನನೋಯುವಂತೆ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಬಸವಣ್ಣನ ಜೀವನದ ಮೌಲ್ಯವಾಗಲಿ, ಅವರ ಬದುಕಿನ ತ್ಯಾಗದ ಅರಿವಿನ ಒಂದು ಅಂಶವನ್ನು ಸಹ ಅರ್ಥಮಾಡಿಕೊಳ್ಳದ ಯತ್ನಾಳ್‌ರಿಗೆ ಮಹಾತ್ಮರ, ದಾರ್ಶನಿಕರ, ಸಮಾಜ ಸುಧಾರಕರ ವಿಚಾರಧಾರೆಗಳು ತಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಸವಣ್ಣನ ಅನುಯಾಯಿಗಳು, 1.96 ಲಕ್ಷ ಶರಣರು ಸೇರಿ ಅವರ ಸಮಕಾಲೀನರೂ ಯೋಗ ಬಲ್ಲವರಾಗಿದ್ದರು. ವೈಜ್ಞಾನಿಕ ತಳಹದಿಯ ಮೇಲೆ ಜಗತ್ತಿಗೆ ಸಂದೇಶ ಸಾರಿದರು. ಆ ಪರಿಕಲ್ಪನೆ ಇಲ್ಲದೆ, ಸಮಾಜದ ನೆಮ್ಮದಿಯನ್ನು ತಮ್ಮ ಸ್ವಾರ್ಥಕ್ಕಾಗಿ ಹಾಳು ಮಾಡುತ್ತಿರುವ ಯತ್ನಾಳ್ ಅವರ ಶಾಸಕ ಸ್ಥಾನ ವಜಾಗೊಳಿಸಬೇಕು ಎಂದು ಕೋರಿದರು.

ದಾನೇಶ್ವರಿ ಮಾತಾಜಿ, ರಾ.ಬ.ದ ರಾಜ್ಯ ಘಟಕದ ಅಧ್ಯಕ್ಷ ವೀರೇಶ್, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net