

ಕೊಪ್ಪಳ: ಲೋಕಸಭೆ ಚುನಾವಣೆ ದೂರವಿದೆ. ಈಗಲೇ 8 ಜನ ಸಂಸದರಿಗೆ ಟಿಕೆಟ್ ಇಲ್ಲವೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುವುದು ಸರಿಯಲ್ಲ. ಹೈಕಮಾಂಡ್ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಯಾರೇ ಆಗಲಿ ಪಕ್ಷದ ವಿರುದ್ಧವಾಗಿ ಮಾತನಾಡಬಾರದು. ಟಿಕೆಟ್ ವಿಯಷವಾಗಿ ಇನ್ನು ಯಾವುದೇ ಚರ್ಚೆ ನಡೆದಿಲ್ಲ. ಆದರೂ ಇಲ್ಲಸಲ್ಲದ್ದನ್ನು ಹೇಳುತ್ತಿದ್ದಾರೆ. ಅವರ ವಿರುದ್ಧ ಪಕ್ಷದ ಹೈ ಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾಜಿ ಶಾಸಕ ರೇಣುಕಾಚಾರ್ಯ ಪಕ್ಷದ ವಿರುದ್ಧವಾಗಿ ಯಾವ ಕಾರಣಕ್ಕಾಗಿ ಮಾತನಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಿದರೆ ಉತ್ತಮ ಎಂದರು.
ಬಿ.ಎಲ್.ಸಂತೋಷ ಸಭೆಗೆ ರಾಜ್ಯದ ಪ್ರಮುಖ ನಾಯಕರು ಗೈರಾದ ಬಗ್ಗೆ ಮಾತನಾಡಿ, ಅಂದು ಅನ್ಯ ಕಾರ್ಯ ನಿಮಿತ್ತ ನಮ್ಮ ನಾಯಕರು ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಹಾಗಂತ ಅವರನ್ನು ದೂರವಿಟ್ಟಿದ್ದಾರೆಂದಲ್ಲ. ಎಲ್ಲರ ಅಭಿಪ್ರಾಯ ಪಡೆಯಲಿದ್ದಾರೆ. ಶೀಘ್ರವೇ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹಳಿ ತಪ್ಪಿದೆ. ಶಾಸಕ ರಾಯರಡ್ಡಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದಿದ್ದಾರೆ. ಅವರು ಯಾವ ಪಕ್ಷದವರೇ ಇರಲಿ. ಅಭಿವೃದ್ಧಿಗೆ, ರೈತರಿಗೆ ಸ್ಪಂದಿಸುತ್ತಿದ್ದಾರೆ. ಅವರೊಬ್ಬ ಹಿರಿಯ ನಾಯಕ. ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಇಲ್ಲದಂತಾಗಿದೆ. ಇಂಡಿಯಾ ಹೆಸರಿನಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಆದರೆ, ಅವರಲ್ಲಿ ಹೊಂದಾಣಿಕೆ ಇಲ್ಲ. ಯಾರನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆಂಬ ಗೊಂದಲವಿದೆ. ರಾವಣನಿಗೆ ಹತ್ತು ತಲೆ ಇದ್ದಂತೆ. ಇಲ್ಲಿ ಯಾರು ಪ್ರಮುಖರು ಎಂಬ ಗೊಂದಲ ಶುರುವಾಗಿದೆ. ಹೊಂದಾಣಿಕೆ ಇಲ್ಲದೆ ಅದೊಂದು ಕಿಚಡಿ ಪಾರ್ಟಿಯಾಗಿದೆ ಎಂದು ವ್ಯಂಗ್ಯವಾಡಿದರು.