

ಚಾಮರಾಜನಗರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಗೌಡ ಲಿಂಗಾಯಿತ-ಪಂಚಮಸಾಲಿ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್ ಆಗ್ರಹಿಸಿದರು.‘
ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಅವರು ಹೊಸದಾಗಿ ಹಿಂದೂ ಪಕ್ಷ ಕಟ್ಟುವ ಕಲ್ಪನೆಯನ್ನು ಕೈಬಿಡಬೇಕು. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು. ಅಂತೆಯೇ ಬಿಜೆಪಿಯ ಕೇಂದ್ರದ ವರಿಷ್ಠರು ಚರ್ಚೆ ನಡೆಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಒಂದು ವೇಳೆ ಯತ್ನಾಳ್ ಹೊಸ ಪಕ್ಷವನ್ನು ಕಟ್ಟಿದರೆ, ಬಿಜೆಪಿ ಮತ್ತು ಹಿಂದೂ ಪಕ್ಷದಿಂದ ಮತಗಳು ವಿಭಜನೆಯಾಗಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಅವಕಾಶವಾಗುತ್ತದೆ. ಆಗಾಗಿ ಮುಂದಿನ ದಿನಗಳಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯದ ಮುಖಂಡರು ಸಭೆ ಸೇರಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಬೇಕು ಎಂದು ದೆಹಲಿಗೆ ತೆರಳಿ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಲೋಕೇಶ್, ಸತೀಶ್, ಮಹದೇವಸ್ವಾಮಿ, ಸುಭಾಷ್ ಹಾಜರಿದ್ದರು.