ಯತ್ನಾಳ ಬಬಲೇಶ್ವರ ಹೆಸರು ಬಿಟ್ಟಿದ್ದು ಏಕೆ? ಸವದಿ ಹೊಂದಾಣಿಕೆ ಬಿಡಿ ಎಂದಿದ್ದು ಯಾರಿಗೆ? ಎಂ.ಬಿ. ಪಾಟೀಲ ಬಿಜೆಪಿಗೆ ಬಂದರೆ ಯಾರಿಗೆ ಖುಷಿ?

IMG-20211008-WA0247
Published on

ವಿಜಯಪುರ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೂ ಮಂತ್ರಿಗಿರಿ ಬೇಕು ಎಂದ ಶಾಸಕ ಯತ್ನಾಳ, ಹೊಂದಾಣಿಕೆ ರಾಜಕಾರಣ ಬಿಡಿ ಎಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಎಂ.ಬಿ. ಪಾಟೀಲ ಬಿಜೆಪಿಗೆ ಬಂದರೆ ಯತ್ನಾಳರಿಗೆ ಖುಷಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ...!

ಅಂದಾಗೆ ಇಷ್ಟೆಲ್ಲಾ ಮಾತಿಗೆ ಮಾತು ಬೆಳೆದಿದ್ದು ಶುಕ್ರವಾರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ.

ಜೆಡಿಎಸ್-ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಸೋಮನಗೌಡ ಪಾಟೀಲ ಮನಗೂಳಿ, ಉಮೇಶ ಕೋಳಕೂರ, ಶಿವಯೋಗಪ್ಪ ನೇದಲಗಿ, ಶಿವಶಂಕರಗೌಡ ಭೈರಗೊಂಡ ಹಾಗೂ ಸುರೇಶಗೌಡ ಪಾಟೀಲರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ಆರಂಭಿಕ ಭಾಷಣದಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಂತ್ರಿಗಿರಿಗೆ ಬೇಡಿಕೆ ಇರಿಸಿದರು.

ನನಗೆ ಮಂತ್ರಿ ಸ್ಥಾನ ಏಕೆ ಕೊಡಲ್ಲ? ಕೊಡಲೇ ಬೇಕು. ಹೋಗಲಿ ನಾನು ಅಯೋಗ್ಯನಾದರೆ ಜಿಲ್ಲೆಯ ಯಾರಿಗಾದರೂ ಕೊಡಿ. ಒಟ್ಟಿನಲ್ಲಿ ಮಂತ್ರಿಗಿರಿ ಕೊಡಿ ಎಂದರು.

ಕಾಂಗ್ರೆಸ್-ಜೆಡಿಎಸ್ ನಾಯಕರ ಸೇರ್ಪಡೆಯಿಂದಾಗಿ ಈ ಬಾರಿ ಬಾವನಬಾಗೇವಾಡಿ, ಇಂಡಿ, ನಾಗಠಾಣ ಕ್ಷೇತ್ರದಲ್ಲಿ 25 ಸಾವಿರ ಮತಗಳಿಂದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎನ್ನುತ್ತಿದ್ದಂತೆ ಬಬಲೇಶ್ವರ ಹೆಸರು ಏಕೆ ಬಿಟ್ಟಿರಿ ಎಂದು ಸಭೀಕನೊಬ್ಬ ಜೋರು ಧ್ವನಿಯಲ್ಲಿ ಪ್ರಶ್ನಿಸಿದನು. ಆದರೆ, ಯತ್ನಾಳ ಮಾತ್ರ ಬಬಲೇಶ್ವರ ಅಭ್ಯರ್ಥಿ ಗೆಲುವಿನ ಬಗ್ಗೆ ಚಕಾರವೆತ್ತಲಿಲ್ಲ.

ಬಳಿಕ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹೊಂದಾಣಿಕೆ ರಾಜಕಾಣ ಮೊದಲು ಬಿಡಿ. ಹೊಂದಾಣಿಕೆ ರಾಜಕಾರಣ ಎಲ್ಲಿಯವರೆಗೆ ನಿಲ್ಲುವುದಿಲ್ಲವೇ ಅಲ್ಲಿಯವರೆಗೆ ನಮ್ಮ ಶಕ್ತಿ ಹೆಚ್ಚಲ್ಲ. ಎಲ್ಲ ಪ್ರಾಮಾಣಿಕರಾಗಿ, ಪಕ್ಷ ನಿಷ್ಟೆ ಯಿಂದ ತಮ್ಮ ತಂದೆ ತಾಯಿ ಸಾಕ್ಷಿಯಾಗಿ ಚುನಾವಣೆ ಮಾಡಿದರೆ ಬಿಜೆಪಿಗೆ ಎಲ್ಲೂ ಸೋಲಿಲ್ಲ. ಈ ಪದ್ದತಿ ಬಿಡಿ. ಕೈ ಮುಗಿದು ಕೇಳುತ್ತೇನೆ. ಪ್ರಾಮಾಣಿಕವಾಗಿ ಈ ಐದು ಜನರನ್ನು ಬಳಸಿಕೊಂಡರೆ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರಲ್ಲ ಸಭೀಕರು ಇನ್ನೊಂದು ಕ್ಷೇತ್ರ ಬಿಟ್ಟಿದ್ದೀರಿ ಎನ್ನುತ್ತಿದ್ದಂತೆ ‘ಗೊತ್ತಿದೆ ಒಂದು ಅಂಡರ್‌ಸ್ಟಾೃಂಡಿಂಗ್’ ಮೇಲೆ ಬಿಡೋಣ ಎಂದರು.

ಅಂತಿಮವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕೀಟಲ ಮಾತನಾಡುತ್ತಾ, ಯಾರಿಗೆ ಯಾವಾಗ ಮಂತ್ರಿ ಸ್ಥಾನ ಕೊಡಬೇಕೆಂಬುದು ಪಕ್ಷ ತೀರ್ಮಾನ ಮಾಡುತ್ತದೆ ಎಂದರಲ್ಲದೇ ಜೆಡಿಎಸ್-ಕಾಂಗ್ರೆಸ್‌ನ ಈ ಐವರ ಬಿಜೆಪಿ ಸೇರ್ಪಡೆಯಿಂದಾಗಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲರ ಮನೆ ಖಾಲಿಗಿದೆ. ಇನ್ನೂ ಆಗುತ್ತದೆ. ಎಂ.ಬಿ. ಪಾಟೀಲರೂ ಬಿಜೆಪಿಗೆ ಬರುತ್ತಾರೆ ಎಂದು ಟಾಂಗ್ ನೀಡಿದರು. ಕೂಡಲೇ ಶಾಸಕ ಯತ್ನಾಳರ ಮುಖ ನೋಡಿ ‘ಯತ್ನಾಳರಿಗೆ ಖುಷಿ ಆಗುತ್ತದೆ’ ಎಂದು ನಗೆ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net