ಯತಿಶ್ರೇಷ್ಠರಲ್ಲಿ ಚಾರುಕೀರ್ತಿ ಭಟ್ಟಾರಕಶ್ರೀ ಒಬ್ಬರು

shree 24
Published on

ಮೈಸೂರು: ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿರುವುದಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕರ್ನಾಟಕದ ಯತಿಶ್ರೇಷ್ಠರಲ್ಲಿ ಒಬ್ಬರಾಗಿದ್ದರು. ಸರಳ ಜೀವಿ, ಪ್ರೇಮಮಯಿ ಆಗಿದ್ದರು. ಅವರ ಅಪೂರ್ವ ದೈವಿ ವ್ಯಕ್ತಿತ್ವದಿಂದ ಎಲ್ಲ ಸಮುದಾಯದವರನ್ನೂ ಆಕರ್ಷಿಸುವ ಗುಣವನ್ನು ಹೊಂದಿದ್ದರು. ಮೈತ್ರೇಹಿ ಕರುಣ ಏವಚ ಎಂಬ ಭಗವದ್ಗೀತೆಯ ಸ್ಥಿತಪ್ರಜ್ಞೆ ಅವರಿಗೆ ಸಿದ್ಧಿಸಿತ್ತು. ಐದು ದಶಕಗಳಿಂದಲೂ ಶಿಕ್ಷಣ, ಧರ್ಮ ಹಾಗೂ ಅಧ್ಯಾತ್ಮ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದರು ಎಂದು ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.

ಎಲ್ಲ ಮಠಗಳ ಬಗ್ಗೆಯೂ ವಿಶೇಷ ಅಕ್ಕರೆಯುಳ್ಳವರಾಗಿದ್ದರು. ಸರ್ವಧರ್ಮ ಸಮಭಾವ, ವಿಶ್ವಭ್ರಾತೃತ್ವ ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು. ಅಹಿಂಸಾ ತತ್ವವನ್ನು ಸದಾ ಬೋಧಿಸುತ್ತಿದ್ದ ಕರ್ಮಜೀವಿಗಳು. ಬಹುಶಃ ಅವರು ಜೈನ ಪರಂಪರೆಯಂತೆ ಸಲ್ಲೇಖನದಲ್ಲಿ ತೊಡಗಿ ಸಾವನ್ನೂ ಪ್ರೀತಿಯಿಂದ ಆಹ್ವಾನಿಸಿದ ಧೀರರು. ಅವರ ಅಧಿಕಾರಾವಧಿಯಲ್ಲಿ ಶ್ರವಣಬೆಳಗೊಳ ಅತ್ಯಾಧುನಿಕವಾಗಿ ಬೆಳೆದು ವಿಶ್ವಮಾನ್ಯವಾಯಿತು ಎಂದು ಸ್ಮರಿಸಿದ್ದಾರೆ.

4 ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಯಶೋವಂತರು. ಧವಳ ಸಂಪುಟಗಳನ್ನು ಕನ್ನಡನಾಡಿಗೆ ದೊರಕಿಸಿಕೊಟ್ಟ ಜ್ಞಾನಪಕ್ಷಪಾತಿಗಳು. ಸ್ವತಃ ದೊಡ್ಡ ವಿದ್ವಾಂಸರು. ಸುತ್ತೂರು ಮಠಕ್ಕೂ, ಶ್ರವಣಬೆಳಗೊಳ ಕ್ಷೇತ್ರಕ್ಕೂ ಇದ್ದ ಅವಿನಾಭಾವ ಸಂಬಂಧಕ್ಕೆ ಅವರು ಸಾಕ್ಷಿಯಾಗಿದ್ದರು. ಇಂಥ ಉದಾತ್ತ ಚೇತನ ಅಸ್ತಂಗತವಾಗಿ ನಾಡು ಶೋಕಸಾಗರದಲ್ಲಿ ಮುಳುಗಿದೆ. ದಿವಂಗತರ ಆತ್ಮಕ್ಕೆ ಜಿನಸಾಯುಜ್ಯ ದೊರೆಯುವಂತಾಗಲಿ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net