

ಯಡ್ರಾಮಿ: ನೂತನ ತಾಲೂಕು ಕೇಂದ್ರವಾಗಿ ಆರು ವರ್ಷವಾದರೂ ಅಗತ್ಯ ಕಚೇರಿಗಳು ಯಡ್ರಾಮಿಗೆ ಬಂದಿಲ್ಲ. ಅದರಲ್ಲೂ ಬಸ್ ಡಿಪೋ ಇಲ್ಲದ್ದರಿಂದ ದೂರದ ಊರುಗಳಿಂದ ಬರುವ ಬಸ್‌ಗಳಿಗೆ ನಿತ್ಯವೂ ಜನ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
2017-18ರಲ್ಲಿ ಅಧಿಕೃತವಾಗಿ ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಸುಮಾರು 1.17 ಲಕ್ಷ ಜನಸಂಖ್ಯೆಯಿದ್ದು, 64 ಗ್ರಾಮಗಳನ್ನು ಒಳಗೊಂಡಿದೆ. ಇದರಲ್ಲಿ ಕೆಲ ಹಳ್ಳಿಗಳಿಗೆ ಬಸ್ ಸೌಕರ್ಯವೇ ಇಲ್ಲದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೈಕ್, ಆಟೋ, ಟ್ರಾö್ಯಕ್ಟರ್ ಇಲ್ಲವೆ ನಡೆದುಕೊಂಡು ವಿವಿಧ ಸ್ಥಳಗಳಿಗೆ ತೆರಳಬೇಕಾಗಿದೆ.
ಕೆಲ ಹಳ್ಳಿಗಳಿಗೆ ಜೇವರ್ಗಿ, ಶಹಾಪುರ, ಸಿಂದಗಿ ಘಟಕದಿಂದ ಬೆರಳಣಿಕೆ ಬಸ್‌ಗಳು ಬರುತ್ತಿವೆ. ಸಮಯವೂ ಇಲ್ಲ, ಬರುವುದು ಖಾತ್ರಿಯಿಲ್ಲ. ಅದರಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದಾಗಿಂದ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಗಳಿಗೆ ಸಮರ್ಪಕ ಬಸ್ ಸೇವೆ ಕಲ್ಪಿಸುವಂತೆ ಹಲವು ಬಾರಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ.
ಬಸ್ ಘಟಕ ನಿರ್ಮಾಣಕ್ಕಾಗಿ ಮರ‍್ನಾಲ್ಕು ವರ್ಷಗಳಿಂದ ತಾಲೂಕಿನ ಅನೇಕ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಆಗ್ರಹಿಸುತ್ತಿದ್ದರೂ ಸೂಕ್ತ ಸ್ಥಳ ಸಿಗುತ್ತಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ವಿಳಂಬ ದೋರಣೆ ಅನುಸರಿಸುತ್ತಿದ್ದಾರೆ. ಈಗಲಾದರೂ ಗಮನಹರಿಸಿ ಬಸ್ ಡಿಪೋ ಸ್ಥಾಪಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಕರೆ ಸ್ವೀಕರಿಸದ ಘಟಕ ವ್ಯವಸ್ಥಾಪಕರು: ಯಡ್ರಾಮಿಯಲ್ಲಿ ಬಸ್ ಘಟಕ ಇಲ್ಲದ್ದರಿಂದ ಜೇವರ್ಗಿ ಡಿಪೋದಿಂದಲೇ ತಾಲೂಕಿನ ಹಳ್ಳಿಗಳಿಗೆ ಬಸ್ ಬಿಡಲಾಗುತ್ತಿದೆ. ಹಳ್ಳಿಗಳಿಗೆ ತೆರಳುವ ಬಸ್ ಕೆಟ್ಟು ನಿಂತಾಗ ಇಲ್ಲವೆ ಬಾರದಿದ್ದಾಗ ಸಾರ್ವಜನಿಕರು ಘಟಕ ವ್ಯವಸ್ಥಾಪಕರಿಗೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಕೆಲವರು ಡಿಪೋಗೆ ತೆರಳಿ ವಿಚಾರಿಸಿದರೆ ಸಿಬ್ಬಂದಿ ಕೊರತೆ, ರಸ್ತೆ ಸರಿಯಿಲ್ಲ, ಮುಳ್ಳು ಕಂಟಿ ಜಾಸ್ತಿ ಬೆಳೆದಿವೆ ಇತರ ಕಾರಣ ನೀಡಿ ಬಸ್ ಓಡಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಲಾಂಗ್ ರೂಟ್ ಬಸ್ ಬಂದ್: ಕಳೆದ ವರ್ಷ ಸ್ಥಳೀಯರ ಒತ್ತಡಕ್ಕೆ ಮಣಿದು ವಿವಿಧ ಘಟಕಗಳಿಂದ ಮುಂಬೈ, ಪುಣೆ, ಧಾರವಾಡ, ಬೆಂಗಳೂರು, ಧರ್ಮಸ್ಥಳ ಸೇರಿ ಹಲವು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಬಸ್ ಬಿಡಲಾಗಿತ್ತು. ಸದ್ಯ ಬೆಂಗಳೂರು ಬಸ್ ಮಾತ್ರ ಸಂಚರಿಸುತ್ತಿದ್ದು, ಉಳಿದವು ಬಾರದ್ದರಿಂದ ದುಡಿಯಲು ದೂರದ ಊರುಗಳಿಗೆ ಹೋಗುವ ಕಾರ್ಮಿಕರು ಹಾಗೂ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಮಹಿಳೆಯರು ಧರ್ಮಸ್ಥಳ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯದಂಥ ಧಾರ್ಮಿಕ ಕೇಂದ್ರಗಳಿಗೆ ತೆರಳಲು ಪರ್ಯಾಯ ಮಾರ್ಗ ಹುಡುಕುವಂತಾಗಿದೆ.