ಯಡಿಯೂರು ಮಂಗಲದ ಶಂಕರೇಶ್ವರಸ್ವಾಮಿ ಬೆಟ್ಟದಲ್ಲಿ ಜಾತ್ರೆ

Published on

ಚಾಮರಾಜನಗರ: ತಾಲೂಕಿನ ಯಡಿಯೂರು ಮಂಗಲ ಗ್ರಾಮದ ಬಳಿಯ ಶಂಕರೇಶ್ವರಸ್ವಾಮಿ ಬೆಟ್ಟದಲ್ಲಿ ಭಾನುವಾರ ವಿಜೃಂಭಣೆಯಿಂದ ಜಾತ್ರೆ ನಡೆಯಿತು.

ಜಾತ್ರೆ ಪ್ರಯುಕ್ತ ಸ್ವಾಮಿಗೆ ಮುಂಜಾನೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ದೇವರಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಲಾಯಿತು. ಬೆಟ್ಟದ ತಪ್ಪಲಿನಲ್ಲಿರುವ ಗಣೀಶ, ಬಸವೇಶ್ವರ, ವೀರಭದ್ರೇಶ್ವರ ದೇವರಿಗೆ ಪೊಜೆ ನೆರವೇರಿಸಲಾಯಿತು. ನಂತರ ಯಡಿಯೂರು ಗ್ರಾಮಸ್ಥರು ಶಂಕರೇಶ್ವರ ಉತ್ಸವ ಮೂರ್ತಿಯನ್ನು ಗ್ರಾಮದಿಂದ ಬೆಟ್ಟದ ತಪ್ಪಲಿನಲ್ಲಿರುವ ವೀರಭದ್ರೇಶ್ವರ ದೇವಾಲಯದ ಮುಂಭಾಗದಲ್ಲಿ ಬಸವ ವಾಹನದ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ನಂದಿಧ್ವಜದೊಂದಿಗೆ ಗ್ರಾಮಕ್ಕೆ ತೆರಳಿ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದೇ ರೀತಿ ಮಂಗಲ ಗ್ರಾಮಸ್ಥರು ತಮ್ಮ ಗ್ರಾಮದಿಂದ ಶಂಕರೇಶ್ವರಸ್ವಾಮಿ ಮತ್ತು ಬೀರೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ವೀರಭದ್ರೇಶ್ವರ ದೇವಾಲಯದಲ್ಲಿ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಬಳಿಕ ವೀರಭದ್ರೇಶ್ವರ ದೇವಾಲಯ ಮುಂಭಾಗದಲ್ಲಿ ಬೀರೇಶ್ವರ ದೇವರನ್ನು ತಲೆ ಮೇಲೆ ಹೊತ್ತು ಕುಣಿಯುವ ದೃಶ್ಯ ಗಮನ ಸೆಳೆಯಿತು. ನಂತರ ಮಂಗಲ ಗ್ರಾಮಸ್ಥರು ಉತ್ಸವಮೂರ್ತಿಗಳೊಂದಿಗೆ ತಮ್ಮ ಗ್ರಾಮಕ್ಕೆ ತೆರಳಿ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿ ಮತ್ತು ಶಂಕರೇಶ್ವರ, ಬೀರೇಶ್ವರ ದೇವರನ್ನು ಮಂಗಳ ವಾದ್ಯಗಳೂಂದಿಗೆ ಮೆರವಣಿಗೆ ಮಾಡಿದರು. ಗಣೇಶಮೂರ್ತಿಯನ್ನು ಗ್ರಾಮದ ಕೆರೆಯಲ್ಲಿ ವಿಸರ್ಜನೆ ಮಾಡಿದರು. ಜಾತ್ರೆಯಲ್ಲಿ ಮಂಗಲ, ಯಡಿಯೂರು, ಮಂತಾಳಪುರ, ಹುಲ್ಲೇಪುರ ಕರಡಿಮೋಳೆ, ಮಂಗಲ ಹೊಸೂರು ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net