ಯಕ್ಷಪ್ರಶ್ನೆಯಾದ ಜಿಲ್ಲೆ ಅಭಿವೃದ್ಧಿ: ಜಾರಿಯಾಗದ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸಿಗುವುದೇ ಉತ್ತರ?

02-03-rama-Budget-mekedatu
Published on

ರಾಮನಗರ: ಮತ್ತೊಂದು ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಗೆ ಏನು ನೀಡಲಿದ್ದಾರೆ ಎನ್ನುವ ಕುತೂಹಲ ಜನತೆಯಲ್ಲಿ ಮೂಡಿದೆ.

ಘಟಾನುಘಟಿ ನಾಯಕರನ್ನು ಹೊಂದಿರುವ ಜಿಲ್ಲೆಗೆ ಕಳೆದ 3 ವರ್ಷಗಳಿಂದಲೂ ಹೆಚ್ಚಿನ ಯೋಜನೆಗಳು ಘೋಷಣೆಯಾಗುತ್ತಿದ್ದರೂ, ಕೆಲವೊಂದು ಹೊರತುಪಡಿಸಿ ಉಳಿದವು ಕಾಗದದ ಕೂಸುಗಳಾಗಿ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹೊಸ ಯೋಜನೆಗಳನ್ನು ಜಿಲ್ಲೆಗೆ ನೀಡುತ್ತಾರೋ ಇಲ್ಲ, ಹಿಂದಿನ ಸರ್ಕಾರಗಳು ನೀಡಿದ ಯೋಜನೆಗಳ ಜಾರಿಗೆ ಮುತುವರ್ಜಿ ವಹಿಸುತ್ತಾರೋ ಎನ್ನುವುದು ಇದೀಗ ಪ್ರಶ್ನೆಯಾಗಿದೆ.

ಜಾರಿಯಾಗಿಲ್ಲ: ಮೇಕೆದಾಟು ಅಣೆಕಟ್ಟೆ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿವಿ ನಿರ್ಮಾಣ ಯೋಜನೆಗಳು ಜಿಲ್ಲೆಯ ಜನರ ದಶಕದ ಕನಸುಗಳಾಗಿವೆ. 13 ವರ್ಷ ಕಳೆದರೂ ಈ ಯೋಜನೆಗಳು ನಿಂತಲ್ಲೇ ನಿಂತಿವೆ. ಮೇಕೆದಾಟು ಯೋಜನೆ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಒಂದಿಷ್ಟು ಪ್ರಗತಿ ಸಾಧಿಸಿತ್ತಾದರೂ, ಬಿಜೆಪಿ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕುಮಾರಸ್ವಾಮಿ ಘೋಷಣೆ ಮಾಡಿದ್ದ ಚಿತ್ರನಗರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರು ಸೇರಿದೆ. ಅಲ್ಲದೆ ಕುಮಾರಸ್ವಾಮಿ ಘೋಷಿಸಿದ್ದ ಚಿತ್ರೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆ ಸಹ ನನೆಗುದಿಗೆ ಬಿದ್ದಿದೆ. ಕುಮಾರಸ್ವಾಮಿ ತಾವು ಎರಡು ದಶಕಗಳ ಕಾಳ ಪ್ರತಿನಿಧಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಭಾಗವಾದ ಕನಕಪುರ ತಾಲೂಕಿನ ಹಾರೋಹಳ್ಳಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದರು. ಆದರೆ ವರ್ಷ ಕಳೆದರೂ ಇದು ಬರೀ ಘೋಷಣೆಯಾಗಿಯೇ ಉಳಿದಿದೆ.

ಸಂಸ್ಕರಣಾ ಘಟಕ ಆಗಿಲ್ಲ: ಮಾವು ಸಂಸ್ಕರಣಾ ಘಟಕ ನಿರ್ಮಿಸುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿ ವರ್ಷವೇ ಕಳೆದಿದ್ದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. 2019ರ ಬಜೆಟ್‌ನಲ್ಲಿ ಇದಕ್ಕಾಗಿ 5 ಕೋಟಿ ರೂ.ಅನುದಾನ ಘೋಷಿಸಿದ್ದರು. ರಾಜ್ಯದಲ್ಲಿ ರಾಮನಗರ ಜಿಲ್ಲೆ ಮಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಸಂಸ್ಕರಣಾ ಘಟಕ ಆರಂಭಿಸಲು ರೈತರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇನ್ನು ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ರಾಮನಗರ ಮಾರುಕಟ್ಟೆಯನ್ನು ಹೈಟೆಕ್ ಮಾಡಲು ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಮೀಸಲಿಟ್ಟಿದ್ದರೂ, ನಿರ್ಮಾಣದ ವಿಚಾರದಲ್ಲಿ ಪ್ರಗತಿ ಆಗಿಲ್ಲ.

ಪ್ರವಾಸವೂ ಬೆಳೆಯಲಿಲ್ಲ: ಮಂಚನಬೆಲೆ ಜಲಾಶಯವನ್ನು ಕೆಆರ್‌ಎಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕನಸನ್ನು ಕುಮಾರಸ್ವಾಮಿ ಬಜೆಟ್ ಮೂಲಕ ಬಿತ್ತಿದ್ದರು. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಲಿವೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ ಈ ಯೋಜನೆ ಕಾಗದದಲ್ಲೇ ಉಳಿದಿದೆ. ಇನ್ನು ರಾಮನಗರದಲ್ಲಿ ಕಲಾಗ್ರಾಮ ನಿರ್ಮಾಣ, ಚನ್ನಪಟ್ಟಣದಲ್ಲಿ ರೇಷ್ಮೆ ಕೈಗಾರಿಕೆ ಪುನಶ್ಚೇತನ ಮತ್ತು ವಸ್ತು ಸಂಗ್ರಹಾಲಯ ಸ್ಥಾಪನೆ, ನೀರಾವರಿ ಯೋಜನೆಗಳ ಪುನಶ್ಚೇತನ ಮತ್ತು ಕಾಲುವೆಗಳ ನವೀಕರಣ ಮೊದಲಾದ ಯೋಜನೆಗಳು ಹಾಗೆಯೇ ಉಳಿದುಹೋಗಿವೆ.

ಒಂದಿಷ್ಟು ಪ್ರಗತಿ: ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳ ಪೈಕಿ ಬೆರಳೆಣಿಕೆಯಷ್ಟು ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ. ಕಣ್ವ ಜಲಾಶಯದಲ್ಲಿ ಉದ್ಯಾನ ನಿರ್ಮಾಣದ ಜತೆಗೆ ಬೋಟಿಂಗ್ ಮತ್ತಿತರ ಸೌಕರ್ಯ ಕಲ್ಪಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ 10 ಕೋಟಿ ರೂ. ವೆಚ್ಚದ ಹೊಸ ಪ್ರಸ್ತಾವನೆ ಸಲ್ಲಿಸಿದೆ. ವೃಷಭಾವತಿ ಕಣಿವೆ ಮತ್ತು ಬೈರಮಂಗಲ ಕೆರೆ ಶುದ್ಧೀಕರಣಕ್ಕೆ ಹಿಂದಿನ ಸರ್ಕಾರಗಳು ಆಸಕ್ತಿ ತೋರಿದ್ದವು. ಸದ್ಯ ಈ ಕಾಮಗಾರಿಗಳು ಬಿರುಸಿನಿಂದ ಸಾಗಿವೆ. ಸತ್ತೆಗಾಲದಿಂದ ಕಣ್ವ, ಮಂಚನೆಬೆಲೆಗೆ ನೀರು ತರುವ ಯೋಜನೆ ಕಾರ್ಯವೂ ಪ್ರಗತಿಯಲ್ಲಿದೆ. ಅಲ್ಲದೆ, ಸಿದ್ಧಗಂಗಾ ಶ್ರೀಗಳ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ.

ಬೇಡಿಕೆ ಬೆಟ್ಟದಷ್ಟಿದೆ: ಕೃಷಿ ಉತ್ಪನ್ನಗಳಿಗೆ ಮೆಗಾ ಮಾರುಕಟ್ಟೆ, ಕಸದ ವಿಲೇವಾರಿಗೆ ವೈಜ್ಞಾನಿಕ ಘಟಕಗಳ ಸ್ಥಾಪನೆ, ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಅನುದಾನ. ಹೀಗೆ ಹತ್ತು ಹಲವು ಯೋಜನೆಗಳು ಬೇಕು ಎನ್ನುವುದು ಜಿಲ್ಲೆಯ ಜನತೆ ಬೇಡಿಕೆ.ಮೇಕೆದಾಟು ಯೋಜನೆ ಜಾರಿ, ಜಿಲ್ಲೆಯಲ್ಲಿ ಮಾವು ಮತ್ತು ತೆಂಗು, ಬಾಳೆ ಸಂಸ್ಕರಣಾ ಘಟಕದ ಬಗ್ಗೆ ಸರ್ಕಾರ ಘೋಷಣೆ ಮಾಡಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತವಾದ ಬಸ್ ನಿಲ್ದಾಣ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಸರ್ಕಾರ ಒದಗಿಸಬೇಕಿದೆ. ಜಿಲ್ಲೆಯಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ಆರಂಭಕ್ಕೆ ಸರ್ಕಾರ ಘೋಷಣೆ ಮಾಡಬೇಕಿದೆ. ಅರ್ಕಾವತಿ, ವೃಷಭಾವತಿ ನದಿ ಶುದ್ಧೀಕರಣಕ್ಕೆ ಸರ್ಕಾರ ಧೃಢ ನಿರ್ಧಾರ ತಾಳಬೇಕಿದೆ. ಥೇಮ್ಸ್ ಮಾದರಿಯಲ್ಲಿ ಅರ್ಕಾವತಿ ದಡದ ಅಭಿವೃದ್ಧಿ ಪ್ರಸ್ತಾವವು ಈಗಾಗಲೇ ಸರ್ಕಾರದ ಮುಂದಿದೆ. ಮಂಚನಬೆಲೆ ಮತ್ತು ಕಣ್ವ ಜಲಾಶಯಗಳ ಕಾಲುವೆಗಳು ಸದ್ಯ ಬಳಕೆಗೆ ಬಾರದಂತೆ ಆಗಿವೆ. ಇವುಗಳ ನವೀಕರಣ ಆದಲ್ಲಿ ರೈತರಿಗೆ ಅನುಕೂಲ ಆಗಲಿದೆ.

ಜಿಲ್ಲೆಯ ರೈತ ಸಮುದಾಯವನ್ನು ಆರ್ಥಿಕವಾಗಿ ಸಬಲವಾಗಿಸುವ ನಿಟ್ಟಿನಲ್ಲಿ ಮೆಗಾ ಮಾರುಕಟ್ಟೆ, ಸಂರಕ್ಷಣಾ ಘಟಕಗಳ ನಿರ್ಮಾಣ ಸೇರಿ ಮಹತ್ವದ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಬೇಕು. ಜತೆಗೆ ಮೇಕೆದಾಟು ಹಾಗೂ ಇತರ ನೀರಾವರಿ ಯೋಜನೆಗಳಿಗೆ ಬಲ ನೀಡಬೇಕು. -ಸಿ.ಪುಟ್ಟಸ್ವಾಮಿ ರೈತ ಮುಖಂಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಹಲವಾರು ಪ್ರಸ್ತಾವನೆ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಮುಖ್ಯಮಂತ್ರಿ ಬಿಎಸ್‌ವೈ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ. ಈ ಬಜೆಟ್ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರಲಿದೆ. -ವರದರಾಜುಗೌಡ ಅಧ್ಯಕ್ಷ, ಗ್ರೇಟರ್ ಬೆಂಗಳೂರು-ಬಿಡಸಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net