* ಸಂವಾದದಲ್ಲಿ ರಂಗ ನಿರ್ದೇಶಕ ವೆಂಕಟರಮಣ ಐತಾಳ ಪ್ರತಿಪಾದನೆ
‘ಯಕ್ಷಗಾನ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ’ ಕುರಿತು ನಗರದ ಸಂತ ಅಲೋಶಿಯಸ್ ಕಾಲೇಜು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ಸಹ ಚಿಂತನೆ ಮತ್ತು ಸಂವಾದವನ್ನು ಅವರು ಉದ್ಘಾಟಿಸಿದರು.
ಕೋಟ ಶಿವರಾಮ ಕಾರಂತರು ಯಕ್ಷಗಾನ ದಲ್ಲಿ ನಡೆಸಿದ ಪ್ರಯೋಗಗಳನ್ನು ನಾವು ಒಪ್ಪದೆ ಅನ್ಯಾಯ ಮಾಡಿದ್ದೇವೆ. ಯಕ್ಷಗಾನದ ಬರವಣೆಗೆ ಮತ್ತು ಪ್ರದರ್ಶನದಲ್ಲಿ ಪ್ರಯೋಗಗಳು ಬೇಕು ಎನ್ನುವ ಅಭಿಪ್ರಾಯಗಳು ನ್ಯಾಯ ಸಮ್ಮತವಾಗಿದೆ ಎಂದವರು ತಿಳಿಸಿದರು.
ಆಧುನಿಕ ಕಾಲದ ತಲ್ಲಣ ಹಾಗೂ ತಾಕಲಾಟಗಳನ್ನು ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಅಭಿವ್ಯಕ್ತಪಡಿಸುವುದು ಒಂದು ಸವಾಲಾಗಿದೆ ಎಂದವರು ಹೇಳಿದರು.
ಮುಖ್ಯ ಅತಿಥಿ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಮಾತನಾಡಿ, ಯಕ್ಷಗಾನ ಒಂದು ವಿಸ್ಮಯ ಮತ್ತು ಹೆಚ್ಚು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕೆಲಸ ಮಾಡುವ ಕ್ರಿಯಾಶೀಲ ರಂಗಭೂಮಿ. ಅದು ತನ್ನ ಅರ್ಥ ವಿಸ್ತಾರವನ್ನು ಮಾಡುತ್ತಲೇ ಪ್ರಸ್ತುತತೆಯನ್ನು ಉಳಿಸಿಕೊಳ್ಳುತ್ತಾ, ಎಲ್ಲ ಸವಾಲು, ಸಂಘರ್ಷಗಳನ್ನು ಎದುರಿಸುತ್ತಾ ಮತ್ತಷ್ಟು ಗಟ್ಟಿಯಾಗುತ್ತಲೇ ಬಂದಿದೆ ಎಂದರು.
ಯಕ್ಷಗಾನ ರಂಗಭೂಮಿಯ ವಿಸ್ತಾರವನ್ನು ನೋಡಿದರೆ ಅಚ್ಚರಿಯಾಗುತ್ತದೆ. 40 ಕ್ಕೂ ಅಧಿಕ ವ್ಯವಸಾಯ ಮೇಳಗಳು, 100 ಕ್ಕೂ ಅಧಿಕ ಹವ್ಯಾಸಿ ಸಂಘಸಂಸ್ಥೆಗಳು, 2000 ಕ್ಕೂ ಅಧಿಕ ವೃತ್ತಿ ಕಲಾವಿದರು, 5000 ಕ್ಕೂ ಅಧಿಕ ಕಲಾವಿದರು ಯಕ್ಷಗಾನದಲ್ಲಿ ತೊಡಗಿದ್ದಾರೆ. ವಾರ್ಷಿಕ 8000 ಕ್ಕೂ ಅಧಿಕ ಪ್ರಯೋಗಗಳು ನಡೆಯುತ್ತಿವೆ. ಓರ್ವ ಕಲಾವಿದ ತನ್ನ ಸುಮಾರು 40 ವರ್ಷ 10 ಸಾವಿರಕ್ಕೂ ಅಧಿಕ ತಿರುಗಾಟ ಮತ್ತು ಅದಕ್ಕಿಂತಲೂ ಅಧಿಕ ಪಾತ್ರಗಳನ್ನು ನಿರ್ವಹಿಸುತ್ತಾನೆ. ಯಕ್ಷಗಾನ ರಂಗಭೂಮಿಯಲ್ಲಿ ವಾರ್ಷಿಕ ಸುಮಾರು 50 ಕೋಟಿ ರೂ ವಹಿವಾಟು ಮತ್ತು 100 ಕೋಟಿ ರೂ ಬಂಡವಾಳ ಹೂಡಿಕೆ ನಡೆಯುತ್ತದೆ ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಶುಪಾಲ ಡಾ.ಪ್ರವೀಣ್ ಮಾರ್ಟಿಸ್, ಯುಜಿಸಿ ಸ್ಟ್ರೈಡ್ ನಿರ್ದೇಶಕ ಡಾ.ಡಾ.ಆಲ್ವಿನ್ ಡೇಸಾ ಮುಖ್ಯ ಅತಿಥಿಗಳಾಗಿದ್ದರು. ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಯ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಕಾರ್ಯಕ್ರಮ ಸಂಯೋಜಕ ಡಾ.ದಿನೇಶ್ ನಾಯಕ್ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಶೆಟ್ಟಿ, ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಯಕ್ಷಗಾನ ಕಲಾವಿದರಾದ ಜಬ್ಬಾರ್ ಸಮೋ, ಕೆರೆಮನೆ ಶಿವಾನಂದ ಹೆಗಡೆ, ವಾಸುದೇವ ರಂಗಾಭಟ್ಟ, ಪ್ರಾದ್ಯಾಪಕ ಡಾ.ಎ.ನಾರಾಯಣ, ಗೋವಾ ವಿವಿ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಶ್ರೀಪಾದ ಭಟ್ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಕಾಲೇಜಿನ ಯಕ್ಷತಂಡದಿಂದ ‘ಮ್ಯಾಕ್‌ಬೆತ್’ ಯಕ್ಷರೂಪ ಪ್ರದರ್ಶನಗೊಂಡಿತು.