

ಶೃಂಗೇರಿ: ಯಕ್ಷಗಾನ ಕಲೆ ಬೆಳೆಸಲು ಕಟ್ಟಿದ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಸುವರ್ಣ ಸಂಭ್ರಮದತ್ತ ಮುನ್ನಡೆಯುತ್ತಿದೆ ಎಂದು ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ನಾಗೇಶ್ ಕಾಮತ್ ಹೇಳಿದರು.
ಹೊನ್ನವಳ್ಳಿ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ 49ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನು ಒಳಗೊಂಡ ಸ್ವತಂತ್ರ ಶಾಸ್ತ್ರೀಯ ಕಲೆ. ಕರ್ನಾಟಕ ಸಾಂಪ್ರದಾಯಿಕ ಕಲಾಪ್ರಕಾರಗಳಲ್ಲಿ ಯಕ್ಷಗಾನ ಅತ್ಯಂತ ಪ್ರಮುಖ. ಮಲೆನಾಡಿನ ಕಲಾವಿದರನ್ನು ಒಗ್ಗೂಡಿಸಿ ಯಕ್ಷಗಾನದ ಪರಂಪರೆಯನ್ನು ಸಂಘ ಬೆಳೆಸಿದೆ. ಆದರೆ ಯಕ್ಷಗಾನದ ಸಹಿತ ವಿವಿಧ ಕಲೆಗೆ ಇಂದಿನ ಯುವ ಜನರು ಆಕರ್ಷಿತರಾಗುತ್ತಿಲ್ಲ. ನಮ್ಮ ಸಂಸ್ಕೃತಿ, ಆಚಾರ-ವಿಚಾರವನ್ನು ಸಾಮಾನ್ಯ ಜನರಿಗೆ ಮನ ಮುಟ್ಟುವಂತೆ ತಿಳಿಸುವ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಲು ಸಂಘ ಹಲವಾರು ಕಾರ್ಯಕ್ರಮ ಆಯೋಜಸುತ್ತ ಬಂದಿದೆ ಎಂದರು.
ಹಿರಿಯ ಅರ್ಥದಾರಿ ಬೈಲುಕೊಪ್ಪ ಶೇಷಗಿರಿಯಪ್ಪ, ಭಾಗವತ ಕಿತ್ಲೆಬೈಲು ಕೃಷ್ಣಮೂರ್ತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶೇಷಗಿರಿರಾವ್, ವೆಂಕಟೇಶ ಆಚಾರ್ಯ, ನರಸಿಂಹಮೂರ್ತಿ, ಎಂ.ಎಸ್.ಜನಾರ್ದನ್, ಹೊನ್ನೆಕೊಡಿಗೆ ಶೇಷಗಿರಿಯಯ್ಯ, ರಮೇಶ್ ಭಟ್, ಸುರೇಶ್, ನಾಗರಾಜ್ ಮತ್ತು ಗಣೇಶ್ ಇದ್ದರು.