

ಸಾಗರ: ತಾಳಮದ್ದಳೆ ಹಾಗೂ ಯಕ್ಷಗಾನದ ಸಮಯದ ಮಿತಿಯು ಪ್ರದರ್ಶನಕ್ಕೆ ಪೂರಕವಾಗಿ ಪ್ರೇಕ್ಷಕರ ಮಾನಸಿಕ ಸಿದ್ಧತೆಗೂ ಒಗ್ಗಿಕೊಳ್ಳುತ್ತದೆ ಎಂದು ಯಕ್ಷಗಾನ ತಾಳಮದ್ದಳೆಯ ವ್ಯಾಖ್ಯಾನಕಾರ ಬಿ.ಟಿ.ಅರುಣ್ ಹೇಳಿದರು.
ಸಾಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿ ಯಕ್ಷಮೇಳದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜಯ ಶೀರ್ಷಿಕೆಯ ತಾಳಮದ್ದಲೆ ಧ್ವನಿಸುರಳಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಯದ ಮಿತಿ ಯಕ್ಷಗಾನ ನೋಡಲು ಪ್ರೇಕ್ಷಕರ ಮನಸ್ಥಿತಿ ಸಜ್ಜಾಗಿರುತ್ತದೆ. ಸಂಪೂರ್ಣ ಪ್ರಸಂಗ ನೋಡಲು ಪ್ರೇಕ್ಷಕರು ಆಸಕ್ತಿವಹಿಸುತ್ತಾರೆ. ಇದರಿಂದ ಕಥೆಯ ಪೂರ್ಣ ಹೂರಣವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಪ್ರತಿಯೊಂದು ಪ್ರದರ್ಶನವೂ ಕಲಾವಿದರು, ಸಂಘಟಕರು ಕಷ್ಟಪಟ್ಟು ಜೋಡಿಸಿರುತ್ತಾರೆ. ಪ್ರೇಕ್ಷಕರು ಅದನ್ನು ನೋಡಿ ವಿಮರ್ಶಿಸಿದಾಗ ಮಾತ್ರ ಸಂಘಟಿಸಿದ್ದು ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿ ನಿವೃತ್ತ ಅಕಾರಿ ಎಸ್.ಎನ್.ಕೃಷ್ಣ ಬಣ್ಣುಮನೆ, ಪ್ರಸ್ತುತ ಸಮಯ ಮಿತಿ, ಪ್ರದರ್ಶನ ಎರಡೂ ಅತ್ಯಗತ್ಯ. ಎಲ್ಲರೂ ಸಮಯದ ಒತ್ತಡದಲ್ಲಿರುತ್ತಾರೆ. ಅಂತಹ ಹೊತ್ತಿನಲ್ಲಿ ಅವರು ಹೆಚ್ಚುಕಾಲ ಹಿಡಿದಿಡಲು ಸಾಧ್ಯವಾಗುವುದಿಲ್ಲ. ಸೀಮಿತ ಅವ ಪ್ರದರ್ಶನದ ಮೂಲಕ ಕಲಾ ಪ್ರದರ್ಶನ ಯಶಸ್ವಿಯಾಗಿಸಬಹುದು ಎಂದು ಹೇಳಿದರು.
ವಂಶವಾಹಿ ಗೌರವ ಕಾರ್ಯದರ್ಶಿ ಶ್ರೀಧರ ಹೆಗಡೆ ಗುಂಡೂಮನೆ, ಡಾ. ಎಚ್.ಎಸ್.ಮೋಹನ್, ನಾಗಭೂಷಣ ಕೇಡಲಸರ ಇತರರಿದ್ದರು. ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ಗುರು ವಿಜಯ ಪ್ರಸಂಗದ ತಾಳಮದ್ದಳೆ ನಡೆಯಿತು.