

ಮುಂಡರಗಿ: ಸಾಲಬಾಧೆ ತಾಳದೆ ವಿಷ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ರೈತ ಈಶಪ್ಪ ಶ್ಯಾನವಾಡ (54) ಆತ್ಮಹತ್ಯೆ ಶರಣಾದ ರೈತ. ಮೇವುಂಡಿ ಸರಹದ್ದಿನಲ್ಲಿ ರೈತ ಈಶಪ್ಪ 9 ಎಕರೆ ಜಮೀನು ಹೊಂದಿದ್ದ. ಮೇವುಂಡಿ ಕೆವಿಜಿ ಬ್ಯಾಂಕ್‌ನಲ್ಲಿ 12 ಲಕ್ಷ ರೂ. ಬೆಳೆ ಸಾಲ ಪಡೆದುಕೊಂಡಿದ್ದ. ಮೂರು ವರ್ಷಗಳಿಂದ ಮತ್ತು ಪ್ರಸ್ತತ ಅತಿಯಾದ ಮಳೆಯಿಂದ ಬಿತ್ತನೆ ಮಾಡಿದ್ದ ಹೆಸರು ಬೆಳೆ ನಾಶವಾಗಿತ್ತು.ಸಾಲದ ಸುಳಿಗೆ ಸಿಲುಕಿದ್ದರಿಂದ ಬುಧವಾರ ತಡರಾತ್ರಿ ಜಮೀನನಲ್ಲಿ ವಿಷ ಸೇವಿಸಿದ್ದಾನೆ. ತಕ್ಷಣ ಪಟ್ಟಣದ ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.