ಯಂತ್ರೋಪಕರಣ ಮೂಲೆ ಸೇರಿದರೆ ಕ್ರಮ

27-pnp 1 (1)
ಪಾಂಡವಪುರ ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಗಣಕ ಯಂತ್ರ, ಯುಪಿಎಸ್, ಬ್ಯಾಟರಿಗಳನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ವಿತರಿಸಿದರು.
Published on

ಪಾಂಡವಪುರ: ಸಹಕಾರ ಸಂಘದ ಕೆಲಸದಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಪ್ರಾಮಾಣಿಕತೆ ಮುಖ್ಯ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಕೇಂದ್ರ ಸರ್ಕಾರದ ಎನ್‌ಪಿಡಿಡಿ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಬ್ಸಿಡಿ ದರದಲ್ಲಿ ನೀಡಿರುವ ಗಣಕ ಯಂತ್ರ, ಯುಪಿಎಸ್, ಬ್ಯಾಟರಿ ಹಾಗೂ ಆಟೋ ಇಎಂಟಿ (ಹಾಲಿನ ಕೊಬ್ಬಿನಾಂಶ ಪರೀಕ್ಷಿಸುವ ಯಂತ್ರ) ಯಂತ್ರೋಪಕರಣಗಳನ್ನು ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ವಿತರಿಸಿ ಮಾತನಾಡಿದರು.

ಹಾಲು ಉತ್ಪಾದಕರ ಕಷ್ಟ ಅರಿವಾಗಿರುವ ಕಾರಣದಿಂದಲೇ ಒಕ್ಕೂಟ ಹಾಲಿನ ದರ ಹೆಚ್ಚಳ ಮಾಡಿದೆ. ರೈತರು ಗುಣಮಟ್ಟದ ಹಾಲು ಪೂರೈಸಿದರೆ ಒಕ್ಕೂಟ ಆರ್ಥಿಕವಾಗಿ ಅಭಿವೃದ್ಧಿ ಕಂಡು ಉತ್ಪಾದಕರಿಗೂ ಒಳ್ಳೆ ದರ ನೀಡಲು ಸಹಾಯವಾಗುತ್ತದೆ ಎಂದರು.

ತಾಲೂಕಿನ 24 ಸಂಘಗಳಿಗೆ ಕಂಪ್ಯೂಟರ್ ಸೇರಿದಂತೆ ಇತರ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ. ಉತ್ಪಾದಕರಿಂದ ಗುಣಮಟ್ಟದ ಹಾಲು ಖರೀದಿಸಿ ಕೊಬ್ಬಿನಾಂಶದ ಮೇಲೆ ದರ ನಿಗದಿ ಮಾಡಬೇಕು. ಈಗ ವಿತರಿಸಿರುವ ಇಎಂಟಿ ಯಂತ್ರ ಹಾಲಿನ ಗುಣಮಟ್ಟ ಪರೀಕ್ಷಿಸಲು ಉತ್ತಮ ಸಾಧನವಾಗಿದೆ. ಯಂತ್ರೋಪಕರಣಗಳನ್ನು ಪಡೆದು ಅದನ್ನು ಬಳಸದೆ ಮೂಲೆಗೆ ಬಿಸಾಡಿದರೆ ನಿದ್ರಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಇಂತಹ ವಿಚಾರದಲ್ಲಿ ಯಾವುದೇ ರಾಜಿ ನಾವು ಸಿದ್ದರಿಲ್ಲ. ಕೇಂದ್ರ ಸರ್ಕಾರ 90 ಸಾವಿರ ರೂ. ಸಬ್ಸಿಡಿ ನೀಡುತ್ತಿದ್ದು, ಸಹಕಾರ ಸಂಘಗಳು ಬಾಕಿ 1.3 ಲಕ್ಷ ರೂ.ಗಳನ್ನು ಕಂತಿನ ರೂಪದಲ್ಲಿ ಪಾವತಿಸಬೇಕಿದೆ ಎಂದರು.

ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರ ಎನ್‌ಪಿಡಿಡಿ ಯೋಜನೆಯಡಿ ರಾಜ್ಯಕ್ಕೆ 2038 ಕೋಟಿ ರೂ. ನೀಡಿದೆ. ಯೋಜನೆಗೆ ಒಟ್ಟಾರೆ 3028 ಕೋಟಿ ರೂ. ಅಗತ್ಯವಿದ್ದು, ಉಳಿಕೆ ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಅಥವಾ ಒಕ್ಕೂಟಗಳು ಭರಿಸಬೇಕಿದೆ ಎಂದರು.

ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರಣಾಧಿಕಾರಿಗಳಾದ ಉಷಾ, ಜಗದೀಶ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net