

ಹಲಗೂರು: ಭಾರಿ ಮಳೆಯಿಂದಾಗಿ ಭೀಮಾ ನದಿ ತುಂಬಿ ಹರಿದ ಪರಿಣಾಮ ಸಮೀಪದ ಟಿ.ಕೆ ಹಳ್ಳಿಯಲ್ಲಿರುವ ಬೆಂಗಳೂರು ಜಲಮಂಡಳಿ ಯಂತ್ರಗಾರ ಮುಳುಗಡೆಯಾಗಿದ್ದ ಹಿನ್ನೆಲೆಯಲ್ಲಿ ಸತತ 22 ಗಂಟೆಗಳ ಕಾರ್ಯಾಚರಣೆ ಬಳಿಕ ನೀರನ್ನು ಹೊರತೆಗೆಯಲಾಗಿದೆ.
ಯಂತ್ರಾಗಾರದಲ್ಲಿ ಸುಮಾರು 23 ಅಡಿ ನೀರು ಸಂಗ್ರಹವಾಗಿತ್ತು. ಸೋಮವಾರ 12 ಅಡಿಯಷ್ಟು ನೀರನ್ನು ಹೊರ ತೆಗೆಯಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಇಂಜಿನಿಯರ್‌ಗಳ 22 ಗಂಟೆಯ ಸತತ ಕಾರ್ಯಾಚರಣೆಯಿಂದ ಉಳಿದ ನೀರನ್ನು ಮಂಗಳವಾರ ಖಾಲಿ ಮಾಡಲಾಯಿತು.
ಕಾರ್ಯಾಚರಣೆ ಬಳಿಕ ಇಂಜಿನಿಯರ್ ರಾಜಶೇಖರ್ ಮಾತನಾಡಿ, ಬೆಂಗಳೂರಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಬುಧವಾರ ಸಂಜೆಯೊಳಗೆ ಬೆಂಗಳೂರಿಗೆ ಪೂರ್ಣ ನೀರು ಸರಬರಾಜು ಮಾಡಲಾಗುವುದು. ನೀರು ಸರಬರಾಜು ಮಾಡುತ್ತಿದ್ದ ಪಂಪುಗಳು ನೀರಿನಲ್ಲಿ ಮುಳುಗುವುದರಿಂದ ಅವುಗಳನ್ನು ತೆರವುಗೊಳಿಸಿ ಬೆಂಗಳೂರಿನ ತಾತಗುಣಿ ಮತ್ತು ಹಾರವಳ್ಳಿಗಳಿಂದ ಮೋಟರ್‌ಗಳನ್ನು ತರಿಸಿ ಮಂಗಳವಾರ ಸಂಜೆ ಕಾರ್ಯ ಪ್ರಾರಂಭ ಮಾಡಿದ್ದೇವೆ. ಈ ಕೆಲಸದಲ್ಲಿ ಸುಮಾರು 50 ತಂತ್ರಜ್ಞರು ಹಗಲು-ರಾತ್ರಿ ಶ್ರಮಿಸಿದ್ದಾರೆ. 80 ಜನರು ಸ್ವಚ್ಛತೆಗೊಳಿಸಿ ನೀರು ಸರಬರಾಜು ಮಾಡಲು ಸತತ ಪ್ರಯತ್ನ ಮಾಡಿದ್ದೇವೆ ಎಂದರು.
ಅಗ್ನಿಶಾಮಕ ದಳದ ಅಧಿಕಾರಿ ನಾಗರಾಜು ಮಾತನಾಡಿ, ನಮಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಸುಮಾರು 10 ವಾಹನದಲ್ಲಿ 70 ಜನರು ನೀರನ್ನು ತೆರವುಗೊಳಿಸಲು ಕಳುಹಿಸಲಾಗಿತ್ತು. 25 ಆಡಿ ಆಳದ 240 ಅಡಿ ಉದ್ದ 80 ಅಡಿ ಅಗಲದಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕಲು ಸಿಬ್ಬಂದಿ ಶ್ರಮಿಸಿರುವುದಾಗಿ ತಿಳಿಸಿದರು.
ಮುಖ್ಯ ಇಂಜಿಜಿಯರ್ ಎಸ್.ವಿ.ರಮೇಶ್ ರಾಜಶೇಖರ್, ಜಯರಾಮ್, ರಾಜೇಶ್, ನರೇಶ್ ಇದ್ದರು.