

ಜಯಪುರ: ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ಕಳೆದ ಬಾರಿಗಿಂತ ಈ ಬಾರಿ 59.8 ಲಕ್ಷ ರೂ. ಹೆಚ್ಚುವರಿ ಲಾಭ ಪಡೆದಿದೆ ಎಂದು ಸಂಘದ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹೇಳಿದರು. ಗುರುವಾರ ಜಯಪುರದ ದುರ್ಗಾಬ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಜಯಪುರ ಒಕ್ಕೂಟ ವ್ಯಾಪ್ತಿಯ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಎರಡು ವರ್ಷಗಳಿಂದ ಕರೊನಾದಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಅಡಕೆ ವ್ಯಾಪಾರ ನಿರಂತರವಾಗಿ ನಡೆದಿದ್ದು 28,394 ಷೇರುದಾರರಿಂದ ಸುಮಾರು 850 ಕೋಟಿ ರೂ. ವ್ಯವಹಾರ ನಡೆದಿದೆ. 2021ನೇ ಸಾಲಿನಲ್ಲಿ ಸಂಘ 3.32 ಕೋಟಿ ರೂ. ಲಾಭಗಳಿಸಿದ್ದರೆ, ಪ್ರಸ್ತುತ ಸಾಲಿನಲ್ಲಿ 3.91ಕೋಟಿ ರೂ. ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.
ಅಡಕೆ ವ್ಯಾಪಾರದೊಂದಿಗೆ ರೈತರಿಗೆ ಕಡಿಮೆ ದರದಲ್ಲಿ ಔಷಧ ಸಿಂಪಡಿಸಲು ಮೈಲುತುತ್ತ, ಸುಣ್ಣ, ರಾಳ, ಔಷಧ ಸಿಂಪಡಿಸುವ ಯಂತ್ರ ನೀಡಲಾಗುತ್ತಿದೆ. ಷೇರುದಾರರಿಗೆ ವಿಮೆ ಯೋಜನೆ, ಸಾಮೂಹಿಕ ವಿಮೆ ಯೋಜನೆ ಮಾಡಿಸಲಾಗುತ್ತಿದೆ. ಪ್ರಸ್ತುತ ವಿಮೆ ಯೋಜನೆಯಿಂದ ಸಂಘಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ. ಹೆಚ್ಚಿನ ಷೇರುದಾರರು ವಿಮೆ ಕಟ್ಟಿದರೆ ನಷ್ಟ ಸರಿದೂಗಿಸಬಹುದು ಎಂದರು.
ಸಂಘ ಅನೇಕ ಶಾಖೆ ಹಾಗೂ ಏಜೆನ್ಸಿಗಳನ್ನು ಹೊಂದಿದ್ದು, ಜಯಪುರ ಏಜೆನ್ಸಿ ಹೆಚ್ಚಿನ ಅಡಕೆ ವ್ಯಾಪಾರ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಸೆ.22ರಂದು ಶಿವಮೊಗ್ಗದ ಕೇಂದ್ರ ಕಚೇರಿಯಲ್ಲಿ ಷೇರುದಾರರ ಸಭೆ ನಡೆಯಲಿದ್ದು, ಎಲ್ಲ ಷೇರುದಾರರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.