

ದಾವಣಗೆರೆ: ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುವ ಕೆಲಸ ನಡೆಯುತ್ತಿದೆ. ಕೂಡಲೇ ಪುನಃ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತಂದರು.
ಬೆಂಗಳೂರು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನವರ್ಸತಿ ಅಧಿನಿಯಮದಡಿ ರಾಜ್ಯ ಮೇಲ್ವಿಚಾರಣ ಸಮಿತಿಯ 6ನೇ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಕೆಲಸ ಮಾಡುತ್ತಿದ್ದರೂ ಅವರನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಪ್ಪು ವರದಿ ಕೊಡುವುದು ಸರಿಯಲ್ಲ. ಕೂಡಲೇ ಸರ್ಕಾರ ಮರು ಸಮೀಕ್ಷೆ ಮಾಡಿ ಅರ್ಹರನ್ನು ಗುರುತಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಆರ್ಥಿಕ ಸಬಲೀಕರಣಕ್ಕಾಗಿ ಅವರ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಉಚಿತ ಸಹಾಯಧನ ನೀಡಬೇಕು. ವಸತಿ ನಿಯಮ ಪ್ರಕಾರ ಅವರು ಮನೆ ಕಟ್ಟಿಸಿಕೊಳ್ಳಲು ಸಾಮಾನ್ಯರಿಗೆ 1 ಲಕ್ಷ, ಎಸ್ಸಿ-ಎಸ್ಟಿಗೆ 1.50 ಲಕ್ಷ ರೂ. ಇದೆ. ಆದರೆ ಇದು ಅವೈಜ್ಞಾನಿಕವಾಗಿದೆ.
ಕೂಡಲೇ ವಸತಿ ನಿಯಮ ಬದಲಾಯಿಸಿ 5 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೆ ನೆರವು ನೀಡಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ನೀಡಬೇಕು. ಜತೆಗೆ ಮುರಾರ್ಜಿ, ನವೋದಯ ಸೇರಿ ವಸತಿಯುತ ಶಾಲೆಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.
---