ಮ್ಯಾಕ್ಸಿಕ್ಯಾಬ್ ಮಾಲೀಕರ ಒಕ್ಕೂಟದಿಂದ ಪ್ರತಿಭಟನೆ

9Jaggu1
15 ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್‌ಗಳನ್ನು ಗುಜರಿಗೆ ಹಾಕುವ ನಿರ್ಧಾರ ಕೈಬಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಉತ್ತರ ಕರ್ನಾಟಕ ಮ್ಯಾಕ್ಸಿಕ್ಯಾಬ್ ಮಾಲೀಕರ ಒಕ್ಕೂಟದಿಂದ ಬೆಳಗಾವಿ ಜಿಲ್ಲಾಧಿಕಾರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಲಾಯಿತು. ಚನ್ನಬಸಪ್ಪ ರಾಚನ್ನವರ, ಹನುಮಂತ ಚಲವಾದಿ, ಮಾರುತಿ ಹಾಲಹರವಿ, ಇಮಾಮಸಾಬ್ ಜಿಗಳೂರ ಇತರರಿದ್ದರು.
Published on

ಬೆಳಗಾವಿ: ಹದಿನೈದು ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್‌ಗಳನ್ನು ಗುಜರಿಗೆ ಹಾಕುವುದಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಮ್ಯಾಕ್ಸಿಕ್ಯಾಬ್ ಮಾಲೀಕರ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಲಾಯಿತು.

1992ರಿಂದ ಇಲ್ಲಿಯವರೆಗೆ ನಮ್ಮ ಮ್ಯಾಕ್ಸಿಕ್ಯಾಬ್‌ಗಳು ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ನೀಡಿವೆ. ಅದರಲ್ಲೂ ಪ್ರವಾಸಿಗರಿಗೆ ಬಹಳಷ್ಟು ಅನುಕೂಲ ಕಲ್ಪಿಸುತ್ತ ಬಂದಿದೆ. ರಾಜ್ಯದಲ್ಲಿ ಇಂತಹ ಮ್ಯಾಕ್ಸಿಕ್ಯಾಬ್‌ಗಳು ಸದ್ಯ 20 ಸಾವಿರದಷ್ಟು ಇವೆ. ಸರ್ಕಾರಕ್ಕೆ ತೆರಿಗೆ ತುಂಬಿ ಸಾರಿಗೆ ಸೇವೆಯಲ್ಲಿ ನಿರತವಾಗಿವೆ. ಕರೊನಾದಲ್ಲಿ ಈ ಮ್ಯಾಕ್ಸಿಕ್ಯಾಬ್ ನಡೆಸುತ್ತಿದ್ದ ಸುಮಾರು ಲಕ್ಷ ಜನರು ಆರ್ಥಿಕವಾಗಿ ತೊಂದರೆಗೀಡಾಗಿದ್ದರು. ಈಗ ಮ್ಯಾಕ್ಸಿಕ್ಯಾಬ್ ಉದ್ಯೋಗ ಚೇತರಿಸಿಕೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮ್ಯಾಕ್ಸಿಕ್ಯಾಬ್ ಖರೀದಿಸುವುದಕ್ಕೆ ಈಗ 25 ಲಕ್ಷ ರೂ. ಬೇಕು. ಸರ್ಕಾರ 12.50 ಲಕ್ಷ ರೂ. ನಮಗೆ ಪರಿಹಾರ ನೀಡಿದರೆ ನಾವು ಹೊಸ ಉದ್ಯೋಗ ಮಾಡುತ್ತೇವೆ ಎಂದು ಆಗ್ರಹಿಸಿದರು.

ವಾಹನಗಳ ಸ್ಥಿತಿಗತಿ ನೋಡಿ ಸಾರಿಗೆ ಸೇವೆ ಕಲ್ಪಿಸಲು ಯೋಗ್ಯವಿದ್ದರೆ ಪರವಾನಗಿ ನೀಡಬೇಕು. 15 ವರ್ಷ ಪೂರೈಸಿವೆ ಎಂಬ ಕಾರಣಕ್ಕೆ ವಿನಾಃಕಾರಣ ಪರವಾನಗಿ ರದ್ದು ಮಾಡಬಾರದು. ಫೆ. 2ರಿಂದ ರಾಜ್ಯದ ಎಲ್ಲ ಪ್ರಾದೇಶಿ ಸಾರಿಗೆ ಕಚೇರಿಯ ಅಧಿಕಾರಿಗಳು ವಾಹನಗಳ ಪಾಸಿಂಗ್ ಮಾಡುವುದನ್ನು ಮತ್ತು ಪರ್ಮಿಟ್ ಕೊಡುವುದನ್ನು ಬಂದ್ ಮಾಡಿದ್ದಾರೆ. 21+1 ಆಸನಗಳ ಪರವಾನಗಿ ತೆಗೆದುಕೊಳ್ಳಲು ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. 21 ಆಸನ ಪರ್ಮಿಟ್ ಕೊಡಲು ಬೆಂಗಳೂರಿನಲ್ಲಿ 15 ಸಾವಿರ ರೂ.ಮತ್ತು ಪ್ರತಿಯೊಂದು ಆರ್‌ಟಿಒ ಕಚೇರಿಯಲ್ಲಿ 10 ಸಾವಿರ ರೂ. ಕೇಳುತ್ತಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು.

ಇಲ್ಲದಿದ್ದರೆ 224 ಶಾಸಕರ ಮನೆ ಬಾಗಿಲಿಗೆ ಹೋಗಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ರವಾನಿಸಿದರು. ಚನ್ನಬಸಪ್ಪ ರಾಚನ್ನವರ, ಹನುಮಂತ ಚಲವಾದಿ, ಮಾರುತಿ ಹಾಲಹರವಿ, ಇಮಾಮಸಾಬ್ ಜಿಗಳೂರ, ಮೋಶಿನ್ ನಿಂಬುವಾಲೆ, ಅಬ್ಬಾಸ್ ಪೀರಜಾದೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net