

ಶಿವಮೊಗ್ಗ: ಲಾಭ ಗಳಿಕೆಯೊಂದೇ ವ್ಯಾಪಾರದ ಗುರಿ ಆಗಬಾರದು. ಮೌಲ್ಯಾಧಾರಿತ ವ್ಯಾಪಾರಕ್ಕೆ ಒತ್ತು ನೀಡುವ ಮೂಲಕವೂ ಲಾಭಗಳಿಕೆ ಸಾಧ್ಯವಿದೆ ಎಂದು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ವಿತರಕರ ಸಂಘದಿಂದ ವಿತರಕರು ಮತ್ತು ವರ್ತಕರ ವಿವರವುಳ್ಳ ‘ಡೈರಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವ್ಯಾಪಾರ-ವ್ಯವಹಾರದ ಮೂಲಕ ಲಾಭಗಳಿಸಿ ಹಣ ಮಾಡಬೇಕೆಂಬ ಬಯಕೆ ಸಹಜ. ಆದರೆ ಹಣಗಳಿಕೆಗೆ ಅಡ್ಡ ದಾರಿ ಹಿಡಿಯಬಾರದು ಎಂದರು.
ಆದಾಯ ತೆರಿಗೆ, ಮಾರಾಟ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕೆಲವು ಜನರಲ್ಲಿ ವರ್ತಕರೆಂದರೆ ವಂಚಕರೆಂಬ ಭಾವನೆ ಇದೆ. ಈ ನಡುವೆ ಕೃತಕ ಅಭಾವ ಸೃಷ್ಟಿಸಿ ಹಣ ಮಾಡಲು ಹಂಬಲಿಸುವವರೂ ಇದ್ದಾರೆ. ಆದರೆ ವ್ಯಾಪಾರದಲ್ಲಿ ಮೌಲ್ಯ ಮೈಗೂಡಿಸಿಕೊಂಡಲ್ಲಿ ಲಾಭ ಗಳಿಕೆಯೊಂದಿಗೆ ಗ್ರಾಹಕರಿಗೂ ಆರ್ಥಿಕವಾಗಿ ಹೊರೆಯಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು.
ಕರೊನಾ ಕಾಲಿಟ್ಟ ಆರಂಭಿಕ ದಿನಗಳಲ್ಲಿ ದಿಢೀರನೆ ಲಾಕ್ಡೌನ್ ಘೊಷಣೆಯಾಯಿತು. ದೇಶಾದ್ಯಂತ ವಾಣಿಜ್ಯ ಕ್ಷೇತ್ರ ಸ್ತಬ್ಧವಾಯಿತು. ನಂತರದ ದಿನಗಳಲ್ಲಿ ವ್ಯಾಪಾರಿಗಳು ಕರೊನಾ ಹಾವಳಿ ನಡುವೆಯೂ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು. ಈ ಮೂಲಕ ವರ್ತಕರು ಹಾಗೂ ವಿತರಕರೂ ಕೂಡ ಕರೊನಾ ಸೇನಾನಿಗಳಾಗಿ ಕಾರ್ಯನಿರ್ವಹಿಸಿದರು ಎಂದು ಶ್ಲಾಘಿಸಿದರು.
‘ಆದಾಯ ತೆರಿಗೆ ಸಲ್ಲಿಕೆ ಮಹತ್ವ ಮತ್ತು ಇತ್ತೀಚೆಗೆ ಆಗಿರುವ ಬದಲಾವಣೆ’ ಕುರಿತು ಹಿರಿಯ ಲೆಕ್ಕ ಪರಿಶೋಧಕ ಕೆ.ವಿ.ವಸಂತಕುಮಾರ್ ಉಪನ್ಯಾಸ ನೀಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ ಮುಖ್ಯ ಅತಿಥಿಯಾಗಿದ್ದರು. ಸಂಘದ ಅಧ್ಯಕ್ಷ ಶಿವರಾಜ್ ಉಡುಗಣಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಕಾರ್ಯದರ್ಶಿ ಬಿ.ಗೋಪಿನಾಥ, ಉಪಾಧ್ಯಕ್ಷ ಬಿ.ಆರ್.ಬದರೀನಾಥ್, ಕಾರ್ಯದರ್ಶಿ ಕೆ.ಎಸ್.ಮೋಹನ್ಕುಮಾರ್, ಖಜಾಂಚಿ ನವೀನ್ ಜವಳಿ, ನಿರ್ದೇಶಕರಾದ ಡಿ.ಜಿ.ಮಂಜುನಾಥ, ಎಂ.ವೈ.ರಾಘವೇಂದ್ರ, ಜಿ.ಎಚ್.ಲಕ್ಷ್ಮೀಪತಿ ಉಪಸ್ಥಿತರಿದ್ದರು.