

ಚಾಮರಾಜನಗರ: ದೇಶದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಸೇವೆ ಅನುಕರಣೀಯ ಎಂದು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ಹೇಳಿದರು.
ನಗರದ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿನ ಗಾಳೀಪುರಕ್ಕೆ ತೆರಳುವ ಬಡಾವಣೆಯಲ್ಲಿ ಭಾನುವಾರ ಮೌಲಾನಾ ಆಜಾದ್ ನಗರ ಎಂಬ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೌಲಾನಾ ಆಜಾದ್ ಅವರು ಭಾಗಿಯಾಗಿದ್ದರು. ಶಿಕ್ಷಣ ತಜ್ಞರಾಗಿದ್ದ ಅವರು ಭಾರತದ ಮೊದಲ ಶಿಕ್ಷಣ ಕೂಡ ಸಚಿವರಾಗಿದ್ದರು. ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಅವರ ಸೇವೆ ಮತ್ತು ಹೋರಾಟ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈಗ ಮೌಲಾನ್ ಆಜಾದ್ ನಗರ ಎಂದು ಹೆಸರಿಸಿರುವ ಬಡಾವಣೆಯಲ್ಲಿ ಹಲವಾರು ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ನಿವಾಸಿಗಳು ತಿರುಪ್ಪೂರ್, ಫಾರೂಕ್ ಬಡಾವಣೆ ಎಂದು ಹೇಳುತ್ತಿದ್ದರು. ಇಲ್ಲಿನ ನಿವಾಸಿಗಳು ಮೌಲಾನಾ ಆಜಾದ್ ನಗರ ಎಂಬ ನಾಮಫಲಕ ಅನಾವರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಡಾವಣೆಯಲ್ಲಿ ಅಭಿವೃದ್ದಿ ಪರ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಖಲೀಲ್ ಉಲ್ಲಾ, ಅಪ್ಸರ್ ಪಾಷಾ, ಇಸ್ರಾದ್, ನಿವೃತ್ತ ಶಿಕ್ಷಕ ಅಜೀಮ್, ಮಹಮದ್ ಅಕ್ಬರ್, ಕಿಫಾಯತ್, ಅನ್ಸರ್ ಪಾಷ ಶಕೀಲ್ ಅಹಮದ್, ಇಂದ್ರೀಜ್ ಖಾನ್, ಅಬೀಬ್ ಅಹಮದ್, ಅಮ್ಜ್‌ತ್‌ಪಾಷ ಹಾಗೂ ನಿವಾಸಿಗಳು ಹಾಜರಿದ್ದರು.