

ಭಾಲ್ಕಿ: ಸಮಾಜದಲ್ಲಿಯ ಮೌಢ್ಯತೆ ಅಳಿದು ಸತ್ಚಾರಿತ್ರ್ಯದ ಸಮಾಜ ನಿರ್ಮಾಣವಾಗಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಬಸವ ಪಂಚಮಿ ನಿಮಿತ್ತ ಪಟ್ಟಣದ ದೊಂಬರಾಟದ ಬುರುಬುರು ಪೋಚಮ್ಮಾ ಓಣಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹಾಲು ಉಣಿಸುವ ಹಬ್ಬದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಆಧುನಿಕ ಜಗತ್ತಿನಲ್ಲಿ ಆದಿಮಾನವರ ತರಹ ಬದುಕುವ ಜನರಿದ್ದಾರೆ ಎನ್ನುವುದು ಈ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ. ಇಂತಹ ದೊಂಬರಾಟದ ಬುರಬುರ ಪೋಚಮ್ಮಾ ಓಣಿಯಲ್ಲಿಯ ಜನರ ಮಕ್ಕಳು ಭಿಕ್ಷೆ ಬೇಡಿ ತಿನ್ನುವುದನ್ನು ಅರಿತ ಹಿರೇಮಠದ ಹಿರಿಯ ಸ್ವಾಮೀಜಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅವರಿಗೆ ಹಿರೇಮಠ ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಶಾಲೆಗೆ ಸೇರಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯಮಾಡಿದ್ದಾರೆ ಎಂದರು.
ಪ್ರತಿವರ್ಷ ನಾಗಪಂಚಮಿ ಹಬ್ಬವನ್ನು ಬಸವ ಪಂಚಮಿ ಹಬ್ಬವಾಗಿ ಆಚರಿಸಿ, ಬಡ, ನಿರ್ಗತಿಕ ಮಕ್ಕಳಿಗೆ ಹಾಲು ಕುಡಿಸಿ, ಊಟ ಬಡಿಸಿ ಸಮಾಜದಲ್ಲಿಯ ಮೌಢ್ಯತೆ ಅಳಿಸುವ ಕಾರ್ಯ ಮಾಡಲಾಗುತ್ತಿದೆ. ಇಂತಹ ಬಡ ಮಕ್ಕಳು ಹೊಟ್ಟೆ ತುಂಬಾ ಊಟ ಮಾಡಿದರೆ ನಾವು ನಾಗಪಂಚಮಿ ಹಬ್ಬ ಆಚರಿಸಿದ್ದಕ್ಕೂ ಸಾರ್ಥಕವಾಗುವುದು ಎಂದು ಹೇಳಿದರು.
ಖಡಕೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಕಲ್ಯಾಣೆ ವಿಶೇಷ ಉಪನ್ಯಾಸ ಮಂಡಿಸಿದರು. ಪುರಸಭೆ ಸದಸ್ಯ ಅಶೋಕ ಗಾಯಕವಾಡ ಹಿರೇಮಠ ಸಂಸ್ಥಾನದ ಕಾರ್ಯಗಳ ಬಗ್ಗೆ ಮೆಲುಕು ಹಾಕಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷ ಗುಂಡಪ್ಪ ಸಂಗಮಕರ ಬಸವ ಗುರುಪೂಜೆ ನರವೇರಿಸಿದರು.
ಮಹಾರಾಷ್ಟ್ರ ಬಸವ ಪರಿಷತ್‌ನ ಶಿವಾನಂದ ಹೈಬತಪುರೆ, ಹಿರೇಮಠದ ಸಾಹಿತಿ ರಾಜು ಜುಬರೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಬಾಬುರಾವ ಹುಣಜೆ, ಗಣಪತಿ ಬಾವುಗೆ, ಶಾಂತಯ್ಯ ಸ್ವಾಮಿ, ಶಿವಪುತ್ರ ದಾಬಶೆಟ್ಟಿ, ಸಾಹಿತಿ ಮಲ್ಲಮ್ಮ ಪಾಟೀಲ, ಮಲ್ಲಮ್ಮ ನಾಗನಕೇರೆ, ಮಹಾನಂದಾ ಮಾಶೆಟ್ಟೆ ಇದ್ದರು. ಮಲ್ಲಮ್ಮಾ ನಾಗನಕೆರೆ ಸ್ವಾಗತಿಸಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಣೆ ಮಾಡಿದರು. ಪ್ರಶಾಂತ ರೆಡ್ಡಿ ವಂದಿಸಿದರು.
ನಾಗಪಂಚಮಿಯಂದು ನಾಗರಿಕರು ಕಲ್ಲು ನಾಗರಕ್ಕೆ ಹಾಲೆರೆಯುವ ಬದಲು ಜೀವಂತ ಮಕ್ಕಳಿಗೆ ಹಾಲುಣಿಸಬೇಕು. ಮಕ್ಕಳ ಆಶೀರ್ವಾವಾದ ಭವಿಷದ ಭದ್ರ ಬುನಾದಿಗೆ ನಾಂದಿಯಾಗುತ್ತದೆ. ಇದು ಹನ್ನೆರಡನೇ ಶತಮಾನದ ಬಸವಣ್ಣನವರ ಆಶಯವಾಗಿತ್ತು.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಹಿರೇಮಠ ಸಂಸ್ಥಾನ ಭಾಲ್ಕಿ