

ಹಾಸನ: ಎನ್‌ಡಿಎ ಒಕ್ಕೂಟ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಯಾವುದೇ ಆತಂಕಕ್ಕೆ ಒಳಗಾಗದೆ ಕೆಲಸ ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದರು.
ಹಾಸನದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 1999ರಲ್ಲಿ ನಾಲ್ಕು ಸ್ಥಾನ ಗೆದ್ದಿದ್ದೆವು. ರಾಜಕೀಯ ಸ್ಥಿತ್ಯಂತರ ನಂತರ ಬಿಜೆಪಿ ಅಭ್ಯರ್ಥಿಗೆ ಡಿಪಾಸಿಟ್ ಕೂಡ ಸಿಗುತ್ತಿರಲಿಲ್ಲ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು. ರಾಜಕೀಯ ಪಲ್ಲಟದಿಂದ 110 ಸೀಟ್ ಬಂತು. ಆಗಲೂ ಕೂಡ ಜಿಲ್ಲೆಯಲ್ಲಿ ಡೆಪಾಸಿಟ್ ಸಿಗಲಿಲ್ಲ. 2018ರಲ್ಲಿ ಬಿಜೆಪಿಯಿಂದ ನಾನು ಶಾಸಕನಾದೆ. ನಾನು ನನ್ನ ಕ್ಷೇತ್ರ ಮಾತ್ರ ನೋಡಲಿಲ್ಲ. ಜಿಲ್ಲೆಯಲ್ಲಿ ಎಲ್ಲರ ಜತೆ ಪಕ್ಷ ಕಟ್ಟುವ ಕೆಲಸ ಮಾಡಿದೆ ಎಂದು ಹೇಳಿದರು.
ಐದು ವರ್ಷದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಲಿಲ್ಲ. ಹೆದರಿಸಿದವರಿಗೆ ಹೆದರದೆ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಬಿಜೆಪಿಯಿಂದ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಈಗ ಜಿಲ್ಲೆಯಲ್ಲಿ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. 2023ರಲ್ಲಿ ಯಡಿಯೂರಪ್ಪ ಅವರ ಆಶೀರ್ವಾದದಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಈ ಎರಡನ್ನು ನಾಲ್ಕು ಮಾಡಬೇಕೆಂದರೆ ಇದೇ ಸ್ವಾಭಿಮಾನ, ಹೋರಾಟ ಮುಂದುವರೆಸಿಕೊಂಡು ಹೋಗಬೇಕು. ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್‌ನಿಂದ, ಜೆಡಿಎಸ್‌ನಿಂದ ತೊಂದರೆಯಾದರೆ ಈ ಪ್ರೀತಂಗೌಡ ಮೊದಲು ಬಂದು ನಿಲ್ಲುತ್ತಾನೆ. ಹಾಸನ ಜಿಲ್ಲೆಯಲ್ಲಿ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ಈ ಪ್ರೀತಂಗೌಡ ಬಿಡಲ್ಲ ಎಂದರು.
ನಾವು ಮೋದಿ ಅವರಿಗೋಸ್ಕರ ರಾಜ್ಯ ನಾಯಕರ ಸೂಚನೆಯಂತೆ ನಡೆಯಬೇಕು. ಯಾವೆಲ್ಲಾ ಕೆಲಸ ಹೇಳುತ್ತಾರೆ. ಸೂಚನೆ ಕೊಡುತ್ತಾರೆ ಅದನ್ನು ಮಾಡೋಣ. ಗುರುವಾರ ಹಾಸನಕ್ಕೆ ಬಿ.ವೈ.ವಿಜಯೇಂದ್ರ ಅವರು ಬರುತ್ತಾರೆ. ಅವರಿಗೆ ಗೌರವ ಕೊಡುವ ಕೆಲಸ ಮಾಡೋಣ. ರಾಷ್ಟ್ರ ಮಟ್ಟದಲ್ಲಿ ಏನು ಮೈತ್ರಿ ಆಗಿದೆ, ಅದರ ಉದ್ದೇಶದಂತೆ ನಡೆದುಕೊಳ್ಳೋಣ ಎಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಮಾತನಾಡಿ, ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರೀತಂಗೌಡರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ಮುಂದೆ ಹಾಸನ ಜಿಲ್ಲೆ ಬಿಜೆಪಿ ಭದ್ರಕೋಟೆ ಆಗಲಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಕಟ್ಟಬೇಕು ಎಂದು ಮೋದಿ, ಅಮಿತ್ ಶಾ ಬಂದು ಹೋಗಿದ್ದಾರೆ. ಕುತಂತ್ರದಿಂದ ನಾವು ಹಾಸನವನ್ನು ಕಳೆದುಕೊಂಡಿದ್ದೇವೆ. ಹಾಸನ, ಮಂಡ್ಯದಲ್ಲಿ ಗೆಲ್ಲುವ ವಾತಾವರಣ ಇತ್ತು. ಇಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬುದು ಗೊತ್ತಿದ್ದರೂ ಜೆಡಿಎಸ್‌ಗೆ ಟಿಕೆಟ್ ನೀಡಿದ್ದಾರೆ. ಈ ಚುನಾವಣೆಯನ್ನು ಯಶಸ್ವಿ ಮಾಡೋಣ. ವಿಜಯೇಂದ್ರ ಅವರು ಬರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪಕ್ಷ ಕೇಂದ್ರ ಮಟ್ಟದಲ್ಲಿ ಮೈತ್ರಿ ಆಗಿರುವುದು ಎಲ್ಲರಿಗೂ ಗೊತ್ತಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು. ಈ ದೇಶ ಮುನ್ನಡೆಸಲು ಇನ್ನೂ ಹೆಚ್ಚಿನ ಶಕ್ತಿ ಕೊಡಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಅಧ್ಯಕ್ಷರಾದ ನವಿಲೆ ಅಣ್ಣಪ್ಪ, ಮುಖಂಡರಾದ ಕೊರಟಗೆರೆ ಪ್ರಕಾಶ, ಶಿವನಂಜೇಗೌಡ, ಬಾಳ್ಳು ಮಲ್ಲಿಕಾರ್ಜುನ, ಪ್ರಸನ್ನ ಕುಮಾರ್ ಇದ್ದರು.