ಮೋದಿ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ

17rajesh7
Published on

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು, ಮೊದಲನೇ ದಿನವೇ ವಿವಿಧ ಸಾಮಾಜಮುಖಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ನರೇಂದ್ರ ಮೋದಿ ಅವರಿಗೆ ಆಯುಷ್ಯ ಆರೋಗ್ಯ ಕೊಡುವಂತೆ ಪ್ರಾರ್ಥಿಸಲಾಯಿತು. ಬಳಿಕ ಮಾರಿಗುಡಿ ಮುಂಭಾಗದಲ್ಲಿ ಆಯೋಜಿಸಿದ್ದ ವಿವಿಧ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಬಿಜೆಪಿ ಮುಖಂಡರು ಚಾಲನೆ ನೀಡಿದರು. ನಂತರ ವೋಕಲ್ ಫಾರ್ ಲೋಕಲ್ ಅಭಿಯಾನದ ಅಂಗವಾಗಿ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಚಾಲನೆ ನೀಡಲಾಯಿತು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹತ್ತಾರು ಅರ್ಹ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್‌ಚೇರ್ ವಿತರಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ನಮ್ಮ ದೇಶವನ್ನು 2013 ರವರೆಗೂ ಅತ್ಯಂತ ಹಿಂದುಳಿದ ದೇಶ, ಬಡವರ ದೇಶ ಎಂದು ಕರೆಯಲಾಗುತ್ತಿತ್ತು. ಆದರೇ ಪ್ರಧಾನಿ ನರೇಂದ್ರ ನೋದಿ ಅವರು ಅಧಿಕಾರಕ್ಕೆ ಬಂದ ನಂತರ ಈ ವರೆಗೆ ಸುಮಾರು 25 ಕೋಟಿ ಬಡವರನ್ನು ಬೆತನ ರೇಖೆಯಿಂದ ಮೇಲೆ ತಂದಿದ್ದಾರೆ. ಆಗಾಗಿಯೇ ಇಂದು ಪ್ರಪಂಚದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನವನ್ನು ಆಚರಣೆ ಮಾಡಲಾಗುತ್ತಿದೆ. ದೇಶದಾದ್ಯಂತ ಇಂದಿನಿಂದ 15 ದಿನಗಳ ಕಾಲವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಈ ವರೆಗೆ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, 11 ವರ್ಷ ಪ್ರಧಾನಿಯಾಗಿ ಆಡಳಿತ ನಡೆಸಿರುವ ಮೋದಿ ಅವರು ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ ಶುದ್ಧ ಹಸ್ತರಾಗಿದ್ದಾರೆ. ಅವರ ಅಭಿವೃದ್ಧಿಯ ಫಲ ಪ್ರತಿಯೊಬ್ಬ ವ್ಯಕ್ತಿಗೂ ಸಿಕ್ಕಿದೆ. 2014 ರಲ್ಲಿ ತಲಾದಾಯ

270 ರೂ ಇತ್ತು, ಪ್ರಸ್ತುತ 670 ರೂ, ಗೆ ಏರಿಕೆಯಾಗಿದೆ. ಈಗ ಸಾಮಾನ್ಯ ಜನರಿಗೆ ಜಿಎಸ್‌ಟಿ ತೆರಿಗೆಯನ್ನು ಸರಳೀಕರಣ ಮಾಡುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಇಡೀ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ಥಳೀಯ ಉತ್ಪನ್ನಗಳ ಬಳಕೆ ಮಾಡುವ ಉದ್ದೇಶದಿಂದ ಮಳಿಗೆಗಳನ್ನು ಹಾಕಿ ಮಾರಾಟ ಮತ್ತು ಪ್ರದರ್ಶನ ಮೇಳ ಆಯೋಜಿಸಲಾಗಿದೆ. ಈ ಮೂಲಕ ಮೋದಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ಜನಸಾಮಾನ್ಯರಿಗೆ ನೀಡಿರುವ ಕೊಡುಗೆಯನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಆರ್.ಬಾಲರಾಜ್, ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ನೊರೊಂದು ಶೆಟ್ಟಿ, ಕಾಡಾ ಮಾಜಿ ಅಧ್ಯಕ್ಷ ನಿಜಗಣರಾಜು, ಮಾಜಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಆರ್.ಸುಂದರ್, ಕಾರ್ಯಕ್ರಮದ ಸಂಚಾಲಕ ಹನೂರು ವೆಂಕಟೇಶ್, ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಸುಂದರ್, ಎಸ್ಸಿ ಮೋರ್ಚಾ ಮೂಡಹಳ್ಳಿ ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಮೂಡ್ನಕೂಡು ಪ್ರಕಾಶ್ ಇನ್ನಿತರರು ಹಾಜರಿದ್ದರು.

ಶಿಬಿರದಲ್ಲಿ ಜನವೇ ನಮೋ:

ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ವಿವಿಧ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ನರೇಂದ್ರ ಮೋದಿ ಮುಖವಾಡವನ್ನು ಧರಿಸಿ ಅವರೇ ನಮೋವಾಗಿದ್ದರು. ಬೆಂಗಳೂರಿನ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣಾ ಶಿಬಿರ, ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್ ಮತ್ತು ಬಸವ ರಾಜೇಂದ್ರ ಆಸ್ಪತ್ರೆ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಬಸವ ರಾಜೇಂದ್ರ ರಕ್ತನಿಧಿ ಕೇಂದ್ರದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಶ್ರೀಚಾಮುಂಡೇಶ್ವರಿ ಕ್ಲಿನಿಕ್ ಮತ್ತು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡು, ಔಷಧಿಯನ್ನು ಪಡೆದುಕೊಂಡರು.

ಸ್ಥಳೀಯ ಉತ್ಪನ್ನಗಳ ಮಾರಾಟ:

ವೋಕಲ್ ಫಾರ್ ಲೋಕಲ್ ಅಭಿಯಾನದ ಅಂಗವಾಗಿ ರೊಟ್ಟಿ ಮನೆ ಮಳಿಗೆಯಲ್ಲಿ ಉತ್ತರ ಕರ್ನಾಟಕದ ವಿಶೇಷ ತಿಂಡಿ ತಿನಿಸುಗಳ ಮಾರಾಟ ನಡೆಯಿತು. ಆರ್ಗಾನಿಕ್ ಪ್ರಾಡಕ್ಟ್, ಗಾಣದ ಎಣ್ಣೆ ಮಾರಾಟ, ಖಾದಿ ಬಟ್ಟೆಗಳ ಮಾರಾಟ, ಅಗರಬತ್ತಿ, ಪತಂಜಲಿ ಮತ್ತು ಸ್ವದೇಶಿ ಉತ್ಪನ್ನಗಳು ಹಾಗೂ ನೇಕಾರರು ತಯಾರಿಸಿದ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾರ್ವಜನಿಕರು ಮಳಿಗೆಗಳಿಗೆ ತೆರಳಿ ವಿವಿಧ ವಸ್ತುಗಳನ್ನು ಖರೀದಿಸುವ ಜತೆಗೆ ಸ್ಥಳೀಯ ಉತ್ಪನ್ನಗಳ ಬಳಕೆಯ ಮಹತ್ವವನ್ನು ಅರಿತುಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವರು ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಅಪಾರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅವರ ಸೇವಾಮನೋಭಾವನೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸುಮಾರು 15 ದಿನಗಳ ಕಾಲ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

-ಎಂ.ರಾಮಚಂದ್ರು, ಮಾಜಿ ಅಧ್ಯಕ್ಷ, ಕೇಂದ್ರ ಪರಿಹಾರ ಸಮಿತಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net