ಮೋದಿ ಹುಟ್ಟು ಹಬ್ಬ ; ರಕ್ತದಾನ ಶಿಬಿರ

ಮೋದಿ ಹುಟ್ಟು ಹಬ್ಬ ; ರಕ್ತದಾನ ಶಿಬಿರ
Published on

ಹಾಸನ: ನರೇಂದ್ರ ಮೋದಿ ಇನ್ನು ಹತ್ತಾರು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಬೇಕು. ಇಡೀ ಪ್ರಪಂಚದಲ್ಲಿ ಭಾರತವನ್ನು ಸದೃಢ ದೇಶವನ್ನಾಗಿ ಮಾಡಲು ಅವರ ನಾಯಕತ್ವ ಅಗತ್ಯ ಎಂದು ಶಾಸಕ ಪ್ರೀತಂ ಜೆ ಗೌಡ ಹಾರೈಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಮೋದಿಯವರ ಹಟ್ಟು ಹಬ್ಬವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಸುತ್ತಿರುವುದು ಸಂತಸದ ವಿಚಾರವಾಗಿದೆ. ಕೆರೆಕಟ್ಟೆಗಳನ್ನು ಪುನಃಶ್ಚೇತನ ಮಾಡುವುದು, ರಕ್ತದಾನ, ಆರೋಗ್ಯ ತಪಾಸಣೆ, ಕೃತಕ ಅಂಗಾಂಗಳ ಜೋಡಣೆ ಹಾಗೂ ಇದೇ ರೀತಿಯ ಹತ್ತು ಹಲವು ರೀತಿಯಲ್ಲಿ ಸೇವಾ ಕಾರ್ಯಗಳನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ಮೋದಿಯವರ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸುವುದು ಸಹ ಈ ಸೇವಾ ಕಾರ್ಯಗಳ ಉದ್ದೇಶವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಮಾತನಾಡಿ, ಈಗಾಗಲೇ ದೇಶವನ್ನು ಅಭಿವೃದ್ಧಿಯತ್ತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚದ ಇತರೆ ದೇಶಗಳು ಭಾರತದತ್ತ ನಿಬ್ಬೆರಗಾಗಿ ತಿರುಗಿನೋಡುವಂತೆ ಮಾಡಿದ್ದಾರೆ. ಜನಸೇವೆ ಮೂಲಕ ಹುಟ್ಟು ಹಬ್ಬ ಆಚರಿಸಬೇಕೆಂಬುದು ಮೋದಿ ಅವರ ಬಯಕೆಯಾಗಿದ್ದು, ಅದರಂತೆ ದೇಶಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಹದಿನೈದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ಜನಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಮೊದಲು ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಶಿಬಿರದಲ್ಲಿ ರಕ್ತದ ಒತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಇಸಿಜಿ, ರಕ್ತದ ಗುಂಪು ಪರೀಕ್ಷೆ, ಕಬ್ಬಿಣಾಂಶದ ಪರೀಕ್ಷೆ , ಕಣ್ಣಿನ ಪರೀಕ್ಷೆ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಉಚಿತ ರಕ್ತದಾನ ಮಾಡಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಅನೂಪ್ ರಂಗನಾಥ್, ಮನೋಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net