

ಕೂಡ್ಲಿಗಿ: ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶದ ಅಭಿವೃದ್ಧಿ ಪಥಕ್ಕೆ ನಾಂದಿ ಹಾಡಿದ ಬಿಜೆಪಿಯ ಹಿರಿಯ ನಾಯಕರನ್ನು ಸ್ಮರಿಸಿಕೊಳ್ಳಬೇಕೆಂದು ಪಪಂ ಸದಸ್ಯ ಹಾಗೂ ಪಕ್ಷದ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಸಚಿನ್ ಕುಮಾರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಡಲ ಘಟಕದಿಂದ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಕ್ಷದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮಾಪ್ರಸಾದ್ ಮುಖರ್ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾನುವಾರ ಮಾತನಾಡಿದರು.
ಭಾರತೀಯ ಜನಸಂಘದ ಆಳವಾದ ಬೇರುಗಳ ಬಲದೊಂದಿಗೆ 1980ರ ಏಪ್ರಿಲ್ 6ರಂದು ಉದಯಗೊಂಡ ಭಾರತೀಯ ಜನತಾ ಪಕ್ಷ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ರಾಜಕೀಯದಲ್ಲಿ ಪಾರುಪತ್ಯ ಸಾಧಿಸಿದ್ದ ಕಾಂಗ್ರೆಸ್‌ಗೆ ಸವಾಲಾಗಿ ಬಿಜೆಪಿ ಬೆಳೆದು ನಿಂತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ಜೋಡಿಯಿಂದಾದ ಪರಿವರ್ತನೆ ಬಿಜೆಪಿಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದೆ ಎಂದು ತಿಳಿಸಿದರು.
ಪ್ರಸ್ತುತ ಭಾರತೀಯ ಹಾಗೂ ಸನಾತನ ಧರ್ಮವನ್ನು ಎತ್ತಿಹಿಡಿಯುವ ಮೂಲಕ ಬಿಜೆಪಿ ದೇಶದಲ್ಲಿ ಸದೃಢವಾಗಿ ನಿಂತಿದೆ. ತ್ರಿವಳಿ ತಲಾಕ್ ಮಸೂದೆ ಅಂಗೀಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಗೊಳಿಸಿರುವುದು ಸೇರಿದಂತೆ ಗಮನಾರ್ಹ ಕೆಲಸವನ್ನು ಬಿಜೆಪಿ ಮಾಡಿದೆ. ಇದರಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಸಚಿನ್ ಕುಮಾರ್ ತಿಳಿಸಿದರು. ಪ್ರಮುಖರಾದ ಕರಿಬಸವರಾಜ, ಸೋಮಣ್ಣ ಇದ್ದರು.