ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ

03ydg01
Published on


ಯಾದಗಿರಿ: ನಾಲ್ಕು ರಾಜ್ಯಗಳಿಗೆ ಜರುಗಿದ್ದ ವಿಧಾನಸಭೆ ಚುನಾವಣೆಯಲ್ಲಿ ಮೂರರಲ್ಲಿ ಬಿಜೆಪಿ ಅಭೂತ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿನ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಛತ್ತಿಸ್ಗಢ, ರಾಜಾಸ್ಥಾನ ಹಾಗೂ ಮಧ್ಯ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದು. ಈ ವಿಜಯ ಮುಂಬರುವ ಲೋಕಸಭೆ ಚುನಾವಣೆ ದಿಕ್ಸೂಚಿಯಾಗಿದೆ. ಅಲ್ಲದೆ, ಅತೀ ಆತ್ಮವಿಶ್ವಾಸದಿಂದ ಮೆರೆದಿದ್ದ ಕಾಂಗ್ರೆಸ್ಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ ಎಂದು ಹೇಳಿದರು.

ಕರ್ನಾಟಕದಂತೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಟ್ರಂಪ್ ಕಾರ್ಡ್ ಹಿಡಿದು ಚುನಾವಣೆ ಎದುರಿಸಿತ್ತು. ಅಲ್ಲದೆ ಬಿಟ್ಟಿ ಭಾಗ್ಯಗಳ ಆಮಿಷ ತೋರಿಸಿತ್ತು. ಆದರೆ ಜನತೆ ಇದಕ್ಕೆ ಸೊಪ್ಪು ಹಾಕದೆ ಬಿಜೆಪಿಯನ್ನು ಬೆಂಬಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಿದ್ದಾರೆ. ದೇಶಕ್ಕೆ ಬೇಕಿರುವುದು ಗ್ಯಾರಂಟಿ ಆಮಿಷಗಳಲ್ಲ, ಅಭಿವೃದ್ಧಿ ಎಂದು ಈ ಫಲಿತಾಂಶ ಸಾರಿ ಹೇಳಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದಲ್ಲೂ ಸಹ ಬಿಜೆಪಿ ಅಲೆಯಿದ್ದು, ಎಲ್ಲ 28 ಕ್ಷೇತ್ರಗಳಲ್ಲಿ ನಮ್ಮ ಅಭ್ಯಥರ್ಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿ, ಈ ಫಲಿತಾಂಶ ನಮ್ಮಂಥ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ. ಲೋಕ ಸಮರಕ್ಕೆ ಸನ್ನದ್ಧರಾಗಲು ಪ್ರೇರಣೆ ನೀಡಿದೆ ಎಂದು ಹರ್ಷ ವ್ಯಕ್ಯಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net