ಮೋದಿ ಮತ್ತೆ ಪ್ರಧಾನಿಯಾದರೆ ಎಸ್‌ಸಿ ಒಳ ಮೀಸಲು ವರ್ಗೀಕರಣ

ctd 002
Published on

ಚಿತ್ರದುರ್ಗ: ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ಮೀಸಲು ವರ್ಗೀಕರಣಕ್ಕೆ ವಿರುದ್ಧವಿದೆ ಎಂದು ರಾಷ್ಟ್ರೀಯ ಮಾದಿಗ ಮೀಸಲು ಹೋರಾಟ ಸಮಿತಿ (ಎಂಆರ್‌ಪಿಎಸ್) ಅಧ್ಯಕ್ಷ ಮಂದಕೃಷ್ಣ ಮಾದಿಗ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಸಿ ಮೀಸಲು ವರ್ಗೀಕರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಅವರು, ಸೋನಿಯಾಗಾಂಧಿ, ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರು ಅಡ್ಡಿಯಾಗಿ ದ್ದಾರೆ. ಆದರೆ ನಮ್ಮ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಎಂಆರ್‌ಪಿಎಸ್ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಸಿದೆ ಎಂದರು.
ಯಾವುದೇ ಕಾರಣಕ್ಕೂ ಸಮಿತಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕಾಗಿ ಸಮಿತಿ ಕಳೆದ 3 ದಶಕಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದು, ಸದ್ಯಕ್ಕೆ ಈ ವಿಚಾರ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠದ ಮುಂದಿದೆ. ವಿಚಾರಣೆ ತ್ವರಿತಗೊಳಿಸಲು ಮೋದಿ ಅವರು ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಎಸ್‌ಸಿ ವರ್ಗೀಕರಣ ಆಗಬೇ ಕೆಂದಾದರೆ ಅದು ಮೋದಿ ಸರ್ಕಾರದಿಂದ ಸಾಧ್ಯ ಎಂದರು.
ಒಳ ಮೀಸಲು ಮನವಿಗೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರು ಸ್ಪಂದಿಸಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಜಸ್ಟೀಸ್ ಸದಾಶಿವ ಆಯೋಗದ ವರದಿ ಪರಿಗಣಿಸಿಲ್ಲ. ಜಸ್ಟೀಸ್ ಉಷಾಮೆಹ್ರಾ ವರದಿಯನ್ನು ಕಡೆಗಣಿಸಲಾಗಿದೆ. ಮೀಸಲು ವರ್ಗೀಕರಣ ಮಾತ್ರವಲ್ಲ, ರಾಜಕೀಯ ಪ್ರಾತಿನಿಧ್ಯದಲ್ಲೂ ಕಾಂಗ್ರೆಸ್ ಮಾದಿಗ ಸಮುದಾಯವನ್ನು ನಿರ್ಲಕ್ಷಿಸಿಕೊಂಡು ಬಂದಿದೆ.
ಆದ್ದರಿಂದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ , ಛತ್ತೀಸ್‌ಗಢ ಸೇರಿದಂತೆ ಯಾವೆಲ್ಲ ರಾಜ್ಯಗಳಲ್ಲಿ ನಮ್ಮ ಶಕ್ತಿ ಬಲವಾಗಿದೆಯೋ ಅಲ್ಲೆಲ್ಲ ಎನ್‌ಡಿಎ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಮೋದಿ 3ನೇ ಬಾರಿ ಪ್ರಧಾನಿಯಾದರೆ ವರ್ಗೀಕರಣ ಸಾಧ್ಯವಾಗಲಿದೆ. ಹೈದರಾಬಾದ್‌ನಲ್ಲಿ ನಡೆದಿದ್ದ ಮಾದಿಗ ವಿಶ್ವ ರೂಪ ಮಹಾ ಸಭಾದಲ್ಲಿ ಮೋದಿ ವರ್ಗೀಕರಣದ ಭರವಸೆ ಕೊಟ್ಟಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಗೀಕರಣಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ ಎಂದರು.
ಮೋದಿ ಅವರನ್ನು ಕಂಡರೆ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ಅಂಜಿಕೆ ಉಂಟಾಗಿದೆ. ದೇಶದ ಸಂಪತ್ತನ್ನು ಲೂಟಿ ಹೊಡೆಯು ವರು ಮೋದಿ ನೋಡಿ ಹೆದರುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ದಲಿತರಲ್ಲಿ ಭೀತಿ ಉ ಂಟು ಮಾಡುತ್ತಿರುವ ಕಾಂಗ್ರೆಸ್ ಅನೇಕ ವರ್ಷಗಳಿಂದ ದಲಿತ ವಿರೋಧಿ ಅನುಸರಿಸಿಕೊಂಡು ಬರುತ್ತಿದೆ ಎಂದು ದೂರಿದರು.
ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ, ಕಾರ‌್ಯದರ್ಶಿ ರವಿಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net