ಮೋದಿ ತೋರಿಸಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಬಿಜೆಪಿ ನಾಯಕರಿಗೆ ಸಿದ್ದು ಟಾಂಗ್

ಮೋದಿ ತೋರಿಸಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಬಿಜೆಪಿ ನಾಯಕರಿಗೆ ಸಿದ್ದು ಟಾಂಗ್
Published on

ಹಾಸನ : ಬಿಜೆಪಿಯವರು ಮೋದಿಯನ್ನು ತೋರಿಸಿ ಚುನಾವಣೆ ಗೆಲ್ಲಬೇಕು ಎಂದುಕೊಂಡಿದ್ದಾರೆ. ಆದರೆ, ಅದು ರಾಜ್ಯದಲ್ಲಿ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅರಸೀಕೆರೆ ಕ್ಷೇತ್ರದ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎಷ್ಟೇ ಬಾರಿ ಬಂದರೂ ಏನು ಆಗಲ್ಲ. ಇಲ್ಲಿ ನಡೆಯುತ್ತಿರುವುದು ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆ. ಇಲ್ಲಿ ರಾಷ್ಟ್ರೀಯ ಸಮಸ್ಯೆಗಳನ್ನ ಚರ್ಚೆ ಮಾಡುವುದಿಲ್ಲ. ಇಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಚರ್ಚೆಯಾಗುತ್ತವೆ ಆದರಿಂದ ಮೋದಿಯಿಂದ ಏನ್ನು ಬದಲಾವಣೆ ಆಗುವುದಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರು ಜೆಡಿಎಸ್‌ಗೆ ಬರ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಟಿಕೆಟ್ ಸಿಗುವುದಿಲ್ಲವೋ ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಂಡು ಟಿಕೆಟ್ ನೀಡುವುದೇ ಅವರ ಕೆಲಸ. ಯಾಕೆಂದರೆ ಅವರಿಗೆ ಅಭ್ಯರ್ಥಿಗಳಿಲ್ಲ. ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ಸಿಗುವುದಿಲ್ಲ ಅವರನ್ನು ಬಿಜೆಪಿಯವರು, ಜೆಡಿಎಸ್‌ನವರು ಕರೆದುಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಹೆಚ್ಚಾಗಿ ಬೇರೆ ಪಕ್ಷಕ್ಕೆ ಹೋಗುವವರಿಲ್ಲ. ಈ ಬಾರಿ ಆಕಾಂಕ್ಷಿಗಳು ಹೆಚ್ಚಿದ್ದು, ಒಂದು ಕೇತ್ರಕ್ಕೆ ಹತ್ತು, ಹದಿನೈದು, ಇಪ್ಪತ್ತು ಜನರಿದ್ದಾರೆ. ಎಲ್ಲರಿಗೂ ಟಿಕೆಟ್ ಕೊಡಲು ಆಗುವುದಿಲ್ಲ. ಒಬ್ಬರಿಗೆ ಮಾತ್ರ ಟಿಕೆಟ್ ಕೊಡೋದು, ಟಿಕೆಟ್ ವಂಚಿತರ ಜೊತೆ ಮಾತನಾಡಿ ಸಮಾಧಾನ ಪಡಿಸಲಾಗುವುದು ಎಂದು ತಿಳಿಸಿದರು.

ಎರಡು ಕಡೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಹಾಗೆ ಮಾಡುತ್ತೇನೆ. ಎರಡು ಕಡೆ ನಿಲ್ಲು ಅಂದರೆ ನಿಲ್ಲುತ್ತೇನೆ, ಇಲ್ಲಾ ಒಂದೇ ಕಡೆ ಅಂದರೂ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಯವರು ಕೋಲಾರದಲ್ಲಿ ಬಂದು ನಿಲ್ಲಿ ಎಂದು ಕರೆಯುತ್ತಿದ್ದಾರೆ, ಹೈಕಮಾಂಡ್ ಒಪ್ಪಿಕೊಂಡರೆ ಬರ್ತಿನಿ ಅಂತ ಹೇಳಿದ್ದೀನಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net