

ಬೈಲಹೊಂಗಲ, ಬೆಳಗಾವಿ: ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲ ವತಿಯಿಂದ ಸೆ.17 ರಿಂದ ಅ.2 ವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ ಜರುಗಲಿದೆ ಎಂದು ಅಮಿತ ವಿಶ್ವನಾಥ ಪಾಟೀಲ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಹೇಳಿದರು.
ಡಾ. ವಿಶ್ವನಾಥ ಪಾಟೀಲ ಅವರ ವಿದ್ಯಾನಗರದ ಗೃಹ ಕಚೇರಿಯಲ್ಲಿ ಶನಿವಾರ ಪದಾಧಿಕಾರಿಗಳ, ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಸೆ. 17 ರಂದು ಯುವ ಮೋರ್ಚಾ ವತಿಯಿಂದ ಪಟ್ಟಣದ ಕೆ.ಆರ್.ಸಿ.ಇ.ಎಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ, ಸೆ. 21 ರಂದು ಗಣಾಚಾರಿ ಕಾಲೇಜ್‌ನಲ್ಲಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಪ್ರದರ್ಶನದ ಕಾರ್ಯಕ್ರಮ, ಸೆ. 22-23 ವರೆಗೆ ಓ.ಬಿ.ಸಿ ಮೋರ್ಚಾ ವತಿಯಿಂದ ಅರಳಿ ಮರದ ಸಸಿ ನೆಡುವ ಅಭಿಯಾನ, ಸೆ. 24-25 ಕಮಲೋತ್ಸವ ಕಾರ್ಯಕ್ರಮ, ಸೆ. 27 ರಂದು ಆನಿಗೋಳ ಸಿದ್ಧಾರೂಢ ಮಠದಲ್ಲಿ ಫಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ ಹಾಗೂ ರೈತ ಮೋರ್ಚಾ ವತಿಯಿಂದ ಅಮೃತ ಸರೋವರ ಆನಿಗೋಳ ಕೆರೆಯ ಪುನಶ್ಚೇತನ ಕಾರ್ಯಕ್ರಮ, ಸೆ. 28-29ವರೆಗೆ ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿ ಸೇವಾ ದಿವಸ ಹಮ್ಮಿಕೊಳ್ಳಲಾಗಿದೆ ಎಂದರು.
ಅ.2 ರಂದು ಮುರಗೋಡ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನ ಹಾಗೂ ಖಾದಿ ಉತ್ಸವ ಪಟ್ಟಣದ ವಿದ್ಯಾನಗರದಲ್ಲಿ ವಾಟಿಕಾ ಉದ್ಯಾನವದಲ್ಲಿ ಜರುಗಲಿದೆ ಎಂದು ತಿಳಿಸಿದರು.
ಮಹೇಶ ಹರಕುಣಿ, ಮಡಿವಾಳಪ್ಪ ಹೋಟಿ, ಮುರುಗೇಶ ಗುಂಡ್ಲೂರ, ಚಂದನ ಕೌಜಲಗಿ, ಆನಂದ ಮೂಗಿ, ಶಿವಪ್ರಸಾದ ಪಾಟೀಲ, ಮಡಿವಾಳಪ್ಪ ಚಿಕ್ಕೊಪ್ಪ, ಅಶೋಕ ಗುಂಡ್ಲೂರ ಇತರರು ಇದ್ದರು.
ರಾಮದುರ್ಗ ವರದಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಸೆ. 17ರಿಂದ ಅ.2ರ ವರೆಗೆ ಸೇವಾ ಪಾಕ್ಷಿಕದ ಆಚರಣೆ ನಿಮಿತ್ತ ಬಿಜೆಪಿ ರಾಮದುರ್ಗ ಮಂಡಲದ ನೇತೃತ್ವದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ ಹೇಳಿದರು.
ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.17ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ, ಅಲ್ಪಸಂಖ್ಯಾತ ಘಟಕದಿಂದ ಸಿಹಿ ವಿತರಣೆ ಕಾರ್ಯಕ್ರಮಗಳನ್ನು ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವದಲ್ಲಿ ಆಯೋಜಿಸಲಾಗಿದೆ ಎಂದರು.
ಸೆ.25ರಂದು ದೀನದಯಾಳ ಉಪಾಧ್ಯಾಯ ಜನ್ಮದಿನದ ನಿಮಿತ್ತ ಸ್ವಚ್ಛ ಭಾರತ, ಉಚಿತ ಕನ್ನಡಕ ವಿತರಣೆ, ಮಳೆ ನೀರಿನ ಕೊಯ್ಲು ಪ್ರಾತ್ಯಕ್ಷಿಕೆ, ಆರೋಗ್ಯ ತಪಾಸಣೆ, ಪರಿಸರ ದಿನಾಚರಣೆ ಮತ್ತು ಅ. 2 ಗಾಂಧಿ ಜಯಂತಿಯಂದು ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಸೇರಿ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ತಾಲೂಕಿನ ಮಾಜಿ ಸೈನಿಕರಿಗೆ, ವಿವಿಧ ಕ್ಷೇತ್ರದ ಸಾಧಕರಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶಿವಾನಂದ ಗುರುಬಸಣ್ಣವರ, ಕಾರ್ಯದರ್ಶಿ ಉಮೇಶ ಹಕಾಟಿ, ರೈತ ಮೋರ್ಚಾ ಅಧ್ಯಕ್ಷ ನಿಂಗನಗೌಡ ಪಾಟೀಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಹಾದೇವಿ ಗುರುಬಸಣ್ಣವರ, ಯುವ ಮೋರ್ಚಾ ಅಧ್ಯಕ್ಷ ಅಕ್ಷಯಕುಮಾರ ಹಲ್ಯಾಳ, ಅಲ್ಪಸಂಖ್ಯಾತ ಅಧ್ಯಕ್ಷ ರಸೂಲ್ ಖಾಜಿ, ನರೇಂದ್ರ ನೀಲಗುಂದ ಇತರರಿದ್ದರು.