

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ದಿನದಿಂದ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿದೆ. ಆದ್ದರಿಂದ ಬಿಜೆಪಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಹುಲ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಬೆಳೆಯುತ್ತಿರುವ ನಾಯಕರ ಬಗ್ಗೆ ಅಸೂಯೆ ಇದ್ದೇ ಇರುತ್ತದೆ. ಅದನ್ನೇ ಬಿಜೆಪಿಯವರು ಮಾಡುತ್ತಿದ್ದಾರೆ. ಪಿಎಂ ನರೇಂದ್ರ ಮೋದಿ ಎಡವುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅಮೆರಿಕಾ ಪ್ರವಾಸದಲ್ಲಿ ಏನಾಯಿತು ? ಎಂಬುದು ಗೊತ್ತಲ್ಲ. ಈ ಹಿನ್ನೆಲೆಯಲ್ಲಿ ಎಲ್ಲವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಹುಲ ಗಾಂಧಿ ಅವರ ಜನಪ್ರಿಯತೆ ಬಗ್ಗೆ ಅಸೂಯೆ ಪಡುತ್ತಿದ್ದಾರೆ ಎಂದರು.
ಜಾತಿ ಗಣತಿ ವರದಿ ಕುರಿತು ಸಂಪೂರ್ಣವಾಗಿ ಅಧ್ಯಯನ ಆಗಿರಲಿಲ್ಲ. ಅದಕ್ಕೆ ಮೇ 2ರಂದು ಮತ್ತೊಮ್ಮೆ ಸಚಿವ ಸಂಪುಟದ ಸಭೆ ಕರೆಯಲಾಗಿದೆ. ಬಿಜೆಪಿಯವರು ತುಷ್ಟೀಕರಣ ಅಸ್ತ್ರ ಹಿಡಿದುಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ಏನಾದರೂ ಸೌಲಭ್ಯ ಕಲ್ಪಿಸಿದರೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಮತ್ತೆ ಅವರು ಬೇಕಾದಾಗ ಇಫ್ತಿಯಾರ್ ಕೂಟ ಮಾಡುತ್ತಾರೆ ಎಂದು ಟೀಕಿಸಿದರು.