ಮೋದಿ ಗ್ಯಾರಂಟಿಗೆ ವಾರಂಟಿ ಇಲ್ಲ

1504Klb09
Published on

ಕಲಬುರಗಿ: ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರ, ಮೋದಿ ಗ್ಯಾರಂಟಿಯ ಪ್ರಣಾಳಿಕೆಯೂ ಮೋದಿ ಅವರ ಫೋಟೋ ಆಲ್ಬಮ್ ಆಗಿದ್ದು, ದೇಶದ ಯುವಕರು, ಮಹಿಳೆಯರು, ಜನೋಪಯೋಗಿ ಅಂಶಗಳಿಲ್ಲ. ೧೦ ವರ್ಷದ ಹಿಂದಿನ ಗ್ಯಾರಂಟಿ ಈಡೇರಿಲ್ಲ. ಅವರ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಪಿಕ್‌ನಿಕ್ ಫೋಟೋ ಬಿಟ್ಟರೆ ಬೇರೇನೂ ಇಲ್ಲ. ಮುಖಪುಟದಲ್ಲಿ ಅಚ್ಛೆದಿನ್, ವಿಕಸಿತ ಭಾರತ, ಮೋದಿ ಗ್ಯಾರಂಟಿ ಎಂದು ಹೊಸ ಪದಗುಚ್ಚಗಳ ಬಳಕೆ ಇದೆ ಬಿಟ್ಟರೆ ಹೊಸತು ಇಲ್ಲ. ಕೇಂದ್ರ ಸರ್ಕಾರದಲ್ಲಿರುವ ಸರ್ಕಾರಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೇಂದ್ರ ಸರ್ಕಾರದಲ್ಲಿ ೩೦ ಲಕ್ಷ ಹುದ್ದೆ ಖಾಲಿ ಇವೆ. ಅದನ್ನು ಭರ್ತಿ ಮಾಡುತ್ತಿಲ್ಲ. ಐಎಲ್‌ಒ ವರದಿ ಪ್ರಕಾರ ದೇಶದಲ್ಲಿ ಶೇ.೮೩ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸಂಸ್ಥೆ ವರದಿ ಪ್ರಕಾರ ಶೇ.೭೩ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ೪೦ ಕೋಟಿ ಜನರಿಗೆ ಕೌಶಲ ತರಬೇತಿ ಎಂದಿದ್ದರು. ಕೇವಲ ೧.೪೦ ಕೋಟಿ ಜನರಿಗೆ ತರಬೇತಿ ನೀಡಿದ್ದರು. ಶೇ.೯೪ ಕೌಶಲ ಕೇಂದ್ರ ಬಂದ್ ಆಗಿವೆ ಎಂದು ಹೇಳಿದರು.

ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕಾನೂನು ರೂಪಿಸುವುದಾಗಿ ಹೇಳಿದ್ದಾರೆ. ನಮ್ಮ ಕರ್ನಾಟಕದಲ್ಲಿ ಈಗಾಗಲೇ ಮಾಡಿದ್ದು, ಅದನ್ನು ಕಾಪಿ ಮಾಡುತ್ತಿದ್ದಾರೆ. ನಾರಿ ಶಕ್ತಿ ಹೆಸರಿನಲ್ಲಿ ಮೂರು ಲಕ್ಷ ಲಕ್ಪತಿ ದಿದಿ ಮಾಡ್ತೇವೆ ಎನ್ನುತ್ತಿದ್ದಾರೆ. ನಮ್ಮ ಸಹಕಾರ ಸಂಘಗಳ ಮೂಲಕ ಎಸ್.ಎಂ.ಕೃಷ್ಣ ಇದ್ದಾಗಲೇ ಮಾಡಿದ್ದಾರೆ. ಅದಕ್ಕೆ ಹೊಸ ಹೆಸರಿನಲ್ಲಿ ತರುತ್ತಿದ್ದಾರೆ ಎಂದರು.

ವರ್ಷಕ್ಕೆ ೨ ಕೋಟಿ ಉದ್ಯೋಗ, ಅಚ್ಛೆದಿನ್, ಬೆಲೆ ಏರಿಕೆ, ರೈತರ ಆದಾಯ ದ್ವಿಗುಣ, ಸ್ಮಾರ್ಟ್ ಸಿಟಿ ಎಲ್ಲಿ ಆಗಿವೆ ತಿಳಿಸಲಿ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಅವರನ್ನು ಅಕ್ಕಪಕ್ಕ ಕೂಡಿಸಿಕೊಂಡು ಮಾತನಾಡುತ್ತಾರೆ. ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಭ್ರಷ್ಟಾಚಾರ ನಿಯಂತ್ರಿಸುತ್ತಿಲ್ಲವೇಕೆ?. ಎಲ್ಲರಿಗೂ ಪಕ್ಕಾ ಮನೆ, ಮೇಕ್ ಇನ್ ಇಂಡಿಯಾ ಏನಾಯ್ತು ಉತ್ತರಿಸಲಿ ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ರಾಜಗೋಪಾಲರಡ್ಡಿ, ಕಿರಣ ದೇಶಮುಖ, ಪ್ರವೀಣ ಹರವಾಳ, ಶಿವಾನಂದ ಹೊನಗುಂಟಿ, ಅರವಿಂದ ಚವ್ಹಾಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net