

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ನಮ್ಮ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳು ಸಾಕಷ್ಟು ಅಭಿವೃದ್ಧಿ ಆಗಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈಲು ನಿಲ್ದಾಣ ಮರು ನಿರ್ಮಾಣ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಗಾಗಿ ಮೋದಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರ ದೂರದೃಷ್ಟಿ ಇತರರಲ್ಲಿ ಕಾಣಲು ಸಾಧ್ಯವಿಲ್ಲ. 508 ರೈಲು ನಿಲ್ದಾಣಗಳು ಏಕಕಾಲಕ್ಕೆ ಅಭಿವೃದ್ಧಿ ಆಗಲಿವೆ. ಇದೇ ಬದಲಾವಣೆ.
ಭಾರತ ಅಭಿವೃದ್ಧಿಯಲ್ಲಿ ಜಗತ್ತಿನ ಮೂರನೇ ದೇಶವಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಸಾರಿಗೆ ಸಂಪರ್ಕವನ್ನು ಅತಿ ಹೆಚ್ಚು ವಿಸ್ತರಿಸುವುದು ಅಭಿವೃದ್ಧಿ ಸಂಕೇತ. ಕೊಪ್ಪಳ ನಿಲ್ದಾಣಕ್ಕೆ 21 ಕೋಟಿ ರೂ., ಮುನಿರಾಬಾದ್ ನಿಲ್ದಾಣಕ್ಕೆ 20 ಕೋಟಿ ರೂ. ಮಂಜೂರಾಗಿದ್ದು, ಮರು ನಿರ್ಮಾಣವಾಗಲಿವೆ. ಅದರಂತೆ ಗಂಗಾವತಿ ನಿಲ್ದಾಣ ಅಭಿವೃದ್ಧಿ ಮಾಡಲು ಮನವಿ ಸಲ್ಲಿಸಿರುವೆ. ಇದಕ್ಕೆ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ್ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಇದನ್ನೂ ಓದಿ: ರಾಜ್ಯಕ್ಕೆ 47 ಸಾವಿರ ಕೋಟಿ ರೂ. ಅನುದಾನ
ರೈಲ್ವೆ ಯೋಜನೆಗಳು ಮೊದಲು ರಾಜ್ಯ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದವು. ಹೀಗಾಗಿ ಸ್ವಾಮಿ ವಿವೇಕಾನಂದ ಶಾಲೆ, ಹುಲಿಗಿ ಸೇತುವೆಗಳು ನನೆಗುದಿಗೆ ಬಿದ್ದಿವೆ. ಆದರೆ ಹೊಸ ನಿಯಮದಂತೆ ಆ ಎಲ್ಲ ಯೋಜನೆಗಳಿಗೆ ಅನುದಾನ ದೊರೆಯಲಿದ್ದು, ಶೀಘ್ರವೇ ಪೂರ್ಣಗೊಳ್ಳಲಿವೆ. ಕುಷ್ಟಗಿ ರೈಲ್ವೆ ಮೇಲ್ಸೇತುವೆ ಯೋಜನೆ ಮರು ನಿಗದಿಯಾಗಿದ್ದು, ಅದಕ್ಕೂ ಅನುದಾನ ಬಿಡುಗಡೆ ಆಗಲಿದೆ. ಮೆಡಿಕಲ್ ಕಾಲೇಜು ರಸ್ತೆಗೂ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಲಿಯೂ ಸೇತುವೆ ಆಗಲಿದೆ ಎಂದು ಮಾಹಿತಿ ನೀಡಿದರು.
ಬ್ಲಡ್ ಬ್ಯಾಂಕ್‌ಗೆ ಪರವಾನಗಿ, ಬೈಪಾಸ್ ರಸ್ತೆ, ಕೇಂದ್ರೀಯ ವಿದ್ಯಾಲಯ ನಿರ್ಮಾಣ, ಭಾಗ್ಯನಗರ ಸೇತುವೆ, ಮಳೆ ಮಾಪನ ಕೇಂದ್ರ, ಮೆಡಿಕಲ್ ಕಾಲೇಜು, ಜೂನ್ ವೇಳೆಗೆ ಕುಷ್ಟಗಿವರೆಗೆ ರೈಲು ಓಡಲಿದೆ. ಕೇವಲ ನಾಲ್ಕೈದು ವರ್ಷದಲ್ಲಿ ತಳಕಲ್-ವಾಡಿ ಕಾಮಗಾರಿ ವೇಗವಾಗಿ ನಡೆದಿದೆ. 1990ರಲ್ಲಿ ಆರಂಭವಾದ ಮುನಿರಾಬಾದ್- ಮೆಹಬೂಬ್ ನಗರ 20 ವರ್ಷವಾದರೂ ಮುಗಿದಿಲ್ಲ. ನಾನು ಸಂಸದನಾದ ಮೇಲೆ ಸಿಂಧನೂರಿನವರೆಗೆ ಹಳಿ ಆಗಿದೆ. ಶೀಘ್ರ ರೈಲು ಓಡಲಿದೆ. ಸಿಂಧನೂರು-ಮಸ್ಕಿ, ಕುಕನೂರು-ಯಲಬುರ್ಗಾ ಮಂಜೂರಾಗಿವೆ. ಪುಣಾ-ಬೆಂಗಳೂರು ನಮ್ಮ ಜಿಲ್ಲೆಯಲ್ಲಿ ಹಾದು ಹೋಗಲಿದೆ. ಜಿಲ್ಲೆಗೆ ವಿಮಾನ ನಿಲ್ದಾಣ ಬೇಕಿದೆ. ನಮ್ಮ ಸರ್ಕಾರ ಕೆಕೆಆರ್‌ಡಿಬಿಯಲ್ಲಿ 40 ಕೋಟಿ ರೂ. ಅನುದಾನ ಘೋಷಿಸಿದೆ. ಆದರೆ ಅನುಷ್ಠಾನ ಮಾಡಿಲ್ಲ. ಈಗಿನ ಸರ್ಕಾರ ಅದನ್ನು ಮುಂದುವರಿಸಬೇಕಿದೆ.
ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆಗಬೇಕಿದೆ. ಈ ಬಗ್ಗೆಯೂ ಕೇಂದ್ರ ಆರೋಗ್ಯ ಸಚಿವ ಮನಸೂಕ್ ಮಾಂಡವೀಯ ಅವರಿಗೆ ಪತ್ರವ್ಯವಹಾರ ನಡೆಸಿರುವೆ. ಅವರು ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕು. ನಮ್ಮ ರೈಲ್ವೆ ಅಧಿಕಾರಿಗಳು ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ನಗರಸಭೆ ಸದಸ್ಯರಾದ ವಿದ್ಯಾ ಹೆಸರೂರು, ಉಮಾ ಪಾಟೀಲ್, ದೇವಕ್ಕ ಕಂದಾರಿ, ಸರ್ವೇಶಗೌಡ ಬನ್ನಿಕೊಪ್ಪ, ಡಿಸಿ ಎಂ.ಸುಂದರೇಶ ಬಾಬು, ಎಸ್ಪಿ ಯಶೋದಾ ವಂಟಗೋಡಿ, ಮಾಜಿ ಶಾಸಕರಾದ ಕೆ.ಶರಣಪ್ಪ, ಪರಣ್ಣ ಮುನವಳ್ಳಿ, ಹುಬ್ಬಳ್ಳಿ ರೈಲ್ವೆ ಎಡಿಎಂ ಸಂಜಯ್ ಸಿಂಗ್, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಇತರರಿದ್ದರು.
25 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದ 508 ರೈಲು ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತಿದೆ. ರೈಲ್ವೆ ಸಂಪರ್ಕ ಜನ ಸಾಮಾನ್ಯರ ಸಾರಿಗೆ. ಮೊದಲು ನಿಲ್ದಾಣಗಳೆಂದರೆ ಅಸ್ವಚ್ಛತೆ ಎಂಬ ಮಾತಿತ್ತು. ಈಗ ಬದಲಾವಣೆ ಆಗಿದೆ. ಅತ್ಯಾಧುನಿಕ ಸೌಲಭ್ಯಗಳು ಬಂದಿವೆ. ಪ್ರಧಾನಿ ಮೋದಿ ಅವರಂತೆ ಸಂಸದರೂ ಯಾವೊಂದು ದಿನ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಕುಷ್ಟಗಿ ಜನ ರೈಲು ಕಂಡಿದ್ದು ಅವಧಿಯಲ್ಲಿ. ಮುಂದೆಯೂ ಹೆಚ್ಚಿನ ಅಭಿವೃದ್ಧಿ ಆಗಲಿ.
ದೊಡ್ಡನಗೌಡ ಪಾಟೀಲ್, ಶಾಸಕ
ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಸಂಪರ್ಕ ಜಾಲ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸಂಸದ ಸಂಗಣ್ಣ ಕರಡಿ ಎರಡು ಬಾರಿ ಸಂಸದರಾಗಿದ್ದು, ಇವರಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳು ವೇಗ ಪಡೆದಿವೆ. ಈಗ ಉನ್ನತ ದರ್ಜೆ ರೈಲ್ವೆ ನಿಲ್ದಾಣ ರಚನೆಯಾಗಲಿದೆ. ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಪುಸ್ತಕ, ಹಣ್ಣಿನ ಮಳಿಗೆಗಳನ್ನು ಆರಂಭಿಸಬೇಕು.
ಹೇಮಲತಾ ನಾಯಕ, ವಿಪ ಸದಸ್ಯೆ
ಮೋದಿಯನ್ನು ಜಗತ್ತೇ ಮೆಚ್ಚಿದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಮೋದಿಯಿಂದ ದೇಶ ಹಾಳಾಗಿದೆ ಎನ್ನುತ್ತಾರೆ. ರಾಜಕಾರಣದಲ್ಲಿ ಟೀಕೆ ಸಹಜ. ಆದರೆ, ಯೋಚಿಸಿ ಟೀಕೆ ಮಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಇವರ ಅಭಿವೃದ್ಧಿ ಏನೆಂದು ರಸ್ತೆಗಳನ್ನು ನೋಡಿದರೆ ತಿಳಿಯುತ್ತದೆ. ರಸ್ತೆಗಳಲ್ಲಿ ತೊಟ್ಟಿಲು ಕಟ್ಟುವಂಥ ಸ್ಥಿತಿ ಇದೆ. ಖಜಾನೆ ಹಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಶಾಸಕರಿಗೆ ಸ್ವತಃ ಸಿಎಂ ಹೇಳುತ್ತಿದ್ದಾರೆ. ಇಂಥವರಿಂದ ಮೋದಿ ಪಾಠ ಹೇಳಿಸಿಕೊಳ್ಳಬೇಕಿಲ್ಲ
ಸಂಗಣ್ಣ ಕರಡಿ, ಸಂಸದ